ಶಿಗ್ಗಾವ್

ಗುಡ್ಡದ ದ್ಯಾಮವ್ವದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಳಿಗೆ ಪ್ರಸಾದ ಸೇವೆ

ಗುಡ್ಡದ  ದ್ಯಾಮವ್ವದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಳಿಗೆ ಪ್ರಸಾದ ಸೇವೆ

ಶಿಗ್ಗಾವಿ 13: ಪಟ್ಟಣದ ಹೊರವಲಯದಲ್ಲಿರುವ ಗುಡ್ಡದ ದ್ಯಾಮವ್ವದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಪ್ರಯುಕ್ತ ದೇವಿಗೆ ಶಿಗ್ಗಾವಿ ಪಟ್ಟಣದ ಕಚೇರಿ ಓಣಿ ಹಾಗೂ ಕಲಾಲ ಓಣಿಯ ಸಾರ್ವಜನಿಕರಿಂದ ಭಕ್ತರಿಗಾಗಿ ಹೋಳಿಗೆ ಪ್ರಸಾದ ಸೇವೆ ನೆರವೇರಿತು. 

ಮಂಗಳವಾರ ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ, ಉಡಿ ತುಂಬುವ ಕಾರ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದ್ಯಾಮವ್ವದೇವಿಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಗುಡ್ಡದ ದ್ಯಾಮವ್ವ ದೇವಿಯು ಭಕ್ತರ ಕಷ್ಟಗಳನ್ನು ಈಡೇರುವ ತಾಯಿಯಂದೇ ಹೆಸರುವಾಸಿಯಾಗಿದ್ದಾಳೆ. 

ವಿವಿಧ ತಾಲೂಕು ಮತ್ತು ವಿವಿಧ ಜಿಲ್ಲೆಗಳಿಂದ ಆಗಮಿಸುವ ಜನತೆ ಈ ದೇವಿಗೆ ತಮ್ಮದೇ ಆದ ಭಕ್ತಿಭಾವ ಮೆರೆಯುತ್ತಾರೆ, ಪ್ರತಿವರ್ಷ ಶ್ರಾವಣ ಮಾಸದ ಕೊನೆಯ ದಿನದಂದು ದೇವಿಗೆ ವಿಶೇಷ ಪೂಜೆ ಹಾಗೂ ಭಕ್ತರಿಗಾಗಿ ಹೋಳಿಗೆ ಸೇವೆಯನ್ನು ಕಚೇರಿ ಓಣಿ ಹಾಗೂ ಕಲಾಲ ಓಣಿಯ ಭಕ್ತರು ನೆರವೇರಿಸುತ್ತಾರೆ ಜೊತೆಗೆ ಮಹಿಳೆಯರೂ ಸಹಿತ ಸ್ವಯಂಪ್ರೇರಿತರಾಗಿ ಹೋಳಿಗೆ ಮಾಡುವ ಕಾರ್ಯದಲ್ಲಿ ನಿರತರಾಗುತ್ತಾರೆ. 

ಕಳೆದ 14 ವರ್ಷಗಳಿಂದ ಈ ಹೋಳಿಗೆ ಪ್ರಸಾದ ಸೇವೆ ಮಾಡುತ್ತಿದ್ದು ವರ್ಷದಿಂದ ವರ್ಷಕ್ಕೆ ಜನ ಹೆಚ್ಚಾಗುತ್ತಲೇ ಸಾಗುತ್ತಿದೆ ಎನ್ನುತ್ತಾರೆ ಕಚೇರಿ ಓಣಿಯ ಭಕ್ತ ಮಲ್ಲೇಶಪ್ಪ ಧಾರವಾಡ. 

35 ಕೆಜಿ ಬೇಳೆಯ ಹೋಳಿಗೆ ಸೇವೆಯಿಂದ ಆರಂಭವಾದ ಈ ಹೋಳಿಗೆ ಪ್ರಸಾದ ಸೇವೆ ಇಂದಿಗೆ ಎರಡು ಕ್ವೀಂಟಾಲ್‌ಗೂ ಹೆಚ್ಚು ಬೇಳೆ, ಎರಡು ಕ್ವೀಂಟಾಲ್ ಮೈದಾಹಿಟ್ಟು, ಏಳು ಕ್ವೀಂಟಾಲ್ ಅಕ್ಕಿ ದಾಟಿದೆ, ಇದಕ್ಕೆ ಆ ತಾಯಿ ದ್ಯಾಮವ್ವ ದೇವಿಯ ಕೃಪೆಯೇ ಕಾರಣ ಎನ್ನುತ್ತಾರೆ. ಕಛೇರಿ ಓಣಿಯ ಭಕ್ತ ರಾಜು ಕೆಂಬಾವಿ. 

ಭಕ್ತರೇ ಇದೆಕ್ಕೆಲ್ಲ ಕಾರಣ, ದೇವಸ್ಥಾನಕ್ಕೆ ಬರುವ ಭಕ್ತ ಸಮೂಹ ಒಬ್ಬರು, ಇಬ್ಬರಿಂದ ಆರಂಭವಾಗಿ ಇಂದಿಗೆ 20 ಸಾವಿರಕ್ಕೂ ಹೆಚ್ಚು ಜನ ಪ್ರಸಾದ ಸೇವೆ ಸವಿಯುತ್ತಾರೆ ಪುರಸಭೆ ಸದಸ್ಯ ಹಾಗೂ ಭಕ್ತ ಮಂಜುನಾಥ ಬ್ಯಾಹಟ್ಟಿ. 

ಒಟ್ಟಾರೆ ದೇವಿಯ ಪರಾಕಾಷ್ಟೆ ಯಾರು ಬಲ್ಲರು? ಎಂಬಂತೆ ಪಟ್ಟಣದ ಗುಡ್ದದ ದ್ಯಾಮವ್ವ ದೇವಿ ಭಕ್ತರನ್ನು ರಕ್ಷಿಸುತ್ತ ವರ್ಷದಿಂದ ವರ್ಷಕ್ಕೆ ದೇವಸ್ಥಾನ ಅಭಿವೃದ್ದಿ ಹೊಂದುತ್ತಿದ್ದು ಭಕ್ತರ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ ಎಂದು ಹೇಳಿದರು. 


ಸುದ್ದಿ ಓದಿ