ಸ್ವಾತಂತ್ರ್ಯೋತ್ಸವದ ವಿಶೇಷ ಆಚರಣೆ ಆ.5 ರಿಂದ 9ರವರೆಗೆ ವಾಸ್ತುಶಿಲ್ಪ ಪರಂಪರೆ ಸ್ಮಾರಕಗಳ ಛಾಯಾಚಿತ್ರ ಪ್ರದರ್ಶನ
ಧಾರವಾಡ 04 : ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧಾರವಾಡ ಜಿಲ್ಲೆಯ ಐತಿಹಾಸಿಕತೆ ಕುರಿತು ಧಾರವಾಡ ಜಿಲ್ಲಾಡಳಿತದಿಂದ ಆಚರಿಸುತ್ತಿರುವ ಸ್ವಾತಂತ್ರ್ಯೋತ್ಸವದ ಪಾಕ್ಷಿಕ ದಿನಾಚರಣೆ ಅಂಗವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣ ಧಾರವಾಡ ವಲಯವು ನಾಳೆ ಆಗಸ್ಟ್ 5 ರಿಂದ 9 ರವರೆಗೆ ಉತ್ತರ ಕರ್ನಾಟಕದ ವಾಸ್ತುಶಿಲ್ಪ ಪರಂಪರೆ ಹಾಗೂ ಸ್ಮಾರಕಗಳು ಎಂಬ ವಿಷಯ ಕುರಿತು ಛಾಯಾಚಿತ್ರ ಪ್ರದರ್ಶನವನ್ನು ಧಾರವಾಡ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಧಾರವಾಡ ವಲಯದ ಅಧೀಕ್ಷಕ ಪುರಾತತ್ವ ಅಧಿಕಾರಿ ಡಾ. ರೇಷ್ಮಾ ಸಾವಂತ್ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಛಾಯಾಚಿತ್ರ ಪ್ರದರ್ಶನದ ಮುಖ್ಯ ಉದ್ದೇಶವೆಂದರೆ ಸ್ಮಾರಕಗಳ ಪ್ರಾಮುಖ್ಯತೆ ಮತ್ತು ಅವುಗಳ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ ಎಂದು ತಿಳಿಸಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಅನೇಕ ರಾಜವಂಶಗಳ ಕಾಲಘಟ್ಟದಲ್ಲಿ ನಿರ್ಮಾಣವಾಗಿರುವ ಸ್ಮಾರಕಗಳ ಕುರಿತು ವಿವರ ಮತ್ತು ಅವುಗಳ ಛಾಯಾಚಿತ್ರಗಳನ್ನು ಈ ಛಾಯಾಚಿತ್ರ ಪ್ರದರ್ಶನದಲ್ಲಿ ಮಾಡಲಾಗಿದೆ. ಆಗಸ್ಟ್ 5 ರಿಂದ 9ರ ವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಛಾಯಾಚಿತ್ರ ಪ್ರದರ್ಶನ ಇರುತ್ತದೆ.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಛಾಯಾಚಿತ್ರ ಪ್ರದರ್ಶನದ ಸದುಪಯೋಗ ಪಡೆದುಕೊಂಡು ಉತ್ತರ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಧಾರವಾಡ ಜಿಲ್ಲೆಯ ಐತಿಹಾಸಿಕ ಘಟನೆಗಳ ಬಗ್ಗೆ, ಭವ್ಯ ಇತಿಹಾಸದ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.