ಗ್ರಾಮಸ್ಥರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ
ತಹಶೀಲ್ದಾರ ವಿಶ್ವನಾಥ ಗೋಠೇಕರ ಅಧಿಕಾರಿಗಳಿಗೆ ಸೂಚನೆ: ಮುರಗುಂಡಿಯಲ್ಲಿ ಗ್ರಾಮ ವಾಸ್ತವ್ಯ
ಅಥಣಿ 18: ಮುರಗುಂಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರ ಸಮಸ್ಯೆಗಳನ್ನು ಅತೀ ಶೀಘ್ರದಲ್ಲಿಯೇ ಬಗೆ ಹರಿಸಿ ಅನುಕೂಲ ಮಾಡಿಕೊಡಬೇಕು ಎಂದು ತಹಶೀಲ್ದಾರ ವಿಶ್ವನಾಥ ಗೋಠೇಕರ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಆದೇಶಿಸಿದರು.
ಅವರು ಮುರಗುಂಡಿ ಗ್ರಾಮದ ಮುರಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ತಾಲೂಕಾ ಆಡಳಿತ ವತಿಯಿಂದ ಮುರಗುಂಡಿ ಗ್ರಾಮ ಪಂಚಾಯತ ಸಹಯೋಗದಲ್ಲಿ ಗ್ರಾಮ ವಾಸ್ತವ್ಯದ ಅಂಗವಾಗಿ ಆಯೋಜಿಸಿದ್ದ ಅಧಿಕಾರಿಗಳ, ಗ್ರಾಮಸ್ಥರ ಸಭೆಯಲ್ಲಿ ಮಾತನಾಡುತ್ತಿದ್ದರು.
ಗ್ರಾಮದಲ್ಲಿ ಸಾರ್ವಜನಿಕವಾಗಿ ಅನೇಕ ಸಮಸ್ಯೆಗಳು ಇರುತ್ತವೆ. ಇದರಿಂದ ರೈತಾಪಿ, ಕಾರ್ಮಿಕ ವರ್ಗಕ್ಕೆ ಸಾಕಷ್ಟು ಅನಾನುಕೂಲವಾಗುತ್ತದೆ ಜೊತೆಗೆ ಸಾಮಾನ್ಯ ನಾಗರಿಕರಿಗೂ ಕೂಡ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ನಿಗದಿತ ಸಮಯದಲ್ಲಿ ಸಮಸ್ಯೆಗಳನ್ನು ಬಗೆಹರಿಸಿ ನನ್ನ ಗಮನಕ್ಕೂ ತನ್ನಿ ಎಂದ ಅವರು ಗ್ರಾಮಸ್ಥರ ಹಾಗೂ ಅಧಿಕಾರಿಗಳ ಮಧ್ಯೆ ಸೌಹಾರ್ದ ಸಂಬಂಧ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ತಿಂಗಳ ಮೂರನೇ ಶನಿವಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ಕರೆ ನೀಡಿದರು.
ಕಳೆದ ಅನೇಕ ವರ್ಷಗಳಿಂದ ಮುರಗುಂಡಿ ಗ್ರಾಮಕ್ಕೆ ಅತೀ ಅವಶ್ಯವಾಗಿ ಬೇಕಾಗಿರುವುದು ಪಶು ವೈದ್ಯಕೀಯ ಚಿಕಿತ್ಸಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಬೇಕು ಎಮದು ಬೇಡಿಕೆ ಇದ್ದರೂ ಕೂಡ ಇಲ್ಲಿಯವರೆಗೂ ಮುರುಗುಂಡಿ ಗ್ರಾಮದ ಗ್ರಾಮಸ್ಥರು ಪಕ್ಕದ ತಂಗಡಿ ಗ್ರಾಮವನ್ನೇ ಅವಲಂಬಿಸಬೇಕಾಗಿದೆ ಹೀಗಾಗಿ ಜಾನುವಾರುಗಳ ಹಾಗೂ ನಮ್ಮ ರಕ್ಷಣೆಗೆ ಈ ಎರಡೂ ಕೇಂದ್ರಗಳನ್ನು ಅತೀ ಶೀಘ್ರದಲ್ಲಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು. ಗ್ರಾಮದಲ್ಲಿ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಇದ್ದರೂ ಕೂಡ ಗ್ರಾಮದಲ್ಲಿ ಮೂರು ಫೇಸ್ ವಿದ್ಯುತ್ ಸಂಪರ್ಕ ಸಮರ್ಕವಾಗಿ ಸಿಗುತ್ತಿಲ್ಲ ಅಲ್ಲದೆ ಹೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷದ ಪರಿಣಾಮ ಅನೇಕ ವಿದ್ಯುತ್ ಸಮಸ್ಯೆಗಳು ಅನೇಕ ವರ್ಷಗಳಿಂದ ಸಮಸ್ಯೆಗಳೇ ಆಗಿ ಉಳಿದಿದ್ದು, ಇವುಗಳನ್ನು ಬಗೆ ಹರಿಸಬೇಕು ಎಂದು ಆಗ್ರಹಿಸಿದರು.
ಮುರಗುಂಡಿ ಗ್ರಾಮದಿಂದ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಅಥಣಿ ಪಟ್ಟಣಕ್ಕೆ ಶಾಲಾ, ಕಾಲೇಜುಗಳಿಗೆ ಹೋಗುತ್ತಾರೆ ಆದರೆ ಕೆ.ಎಸ್.ಆರ್.ಟಿ.ಸಿ ಬಸ್ ಮಾತ್ರ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ ಹೀಗಾಗಿ ಅನೇಕ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದ್ದು, ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆ ಬಗೆ ಹರಿಸಲು ಸೂಚನೆ ನೀಡಬೇಕು ಎಂದರು. ಗ್ರಾಮದಲ್ಲಿ ಅಕ್ರಮವಾಗಿ ಅನೇಕ ಅಂಗಡಿ, ಮುಗ್ಗಟ್ಟುಗಳಲ್ಲಿ ಸಾರಾಯಿ ಮಾರಾಟ ಆಗುತ್ತಿದ್ದರು ಕೂಡ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ದೂರಿದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕೃಷಿ, ಕಂದಾಯ, ಸಮಾಜ ಕಲ್ಯಾಣ, ಪಶು ವೈದ್ಯಕೀಯ, ಆರೋಗ್ಯ, ಅರಣ್ಯ, ಅಬಕಾರಿ, ಹೆಸ್ಕಾಂ, ತೋಟಗಾರಿಕೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ವಿವಿಧ ಯೋಜನೆಗಳ ಮಾಹಿತಿ ನೀಡಿದರು ಮತ್ತು ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಶೋಭಾ ಅನೀಲಕುಮಾರ ಪಾಟೀಲ, ಗ್ರಾಮದ ಮುಖಂಡರಾದ ಹೊಳೆಪ್ಪ ಪೂಜಾರಿ, ಭರಮಾ ಮಗಾಡಿ, ಶಿದರಾಯ ಕಾಳೇಲಿ, ಮುತ್ತಪ್ಪ ಮಗಾಡಿ, ಬಸವರಾಜ ಪಾಟೀಲ, ಪಿ.ಡಿ.ಒ ಎಸ್.ಎಸ್.ಸನಾಳ, ಕಂದಾಯ ನೀರೀಕ್ಷಕ ಎಸ್.ಬಿಮಮೆಣಸಂಗಿ, ಗ್ರಾಮ ಲೆಕ್ಕಾಧಿಕಾರಿ ಎಸ್.ಬಿ.ಕಾಂಬಳೆ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಿ.ಎಸ್.ಗುರವ ನಿರೂಪಿಸಿದರು.