ಮನುಷ್ಯನ ಜೀವನ ಸಾರ್ಥಕತೆಗೆ ಸಮಾಜ ಸೇವೆ ಸಹಕಾರಿ: ನೆಗಳೂರು ಶ್ರೀಗಳು
ರಾಣೇಬೆನ್ನೂರು 08: ಮನುಷ್ಯನ ಜೀವನ ಎಂದಿಗೂ ಶಾಸ್ವತವಲ್ಲ. ಹುಟ್ಟು ಆಕಸ್ಮಿಕ, ಸಾವು ಖಚಿತ. ಹುಟ್ಟು ಮತ್ತು ಬದುಕಿನ ಮಧ್ಯೆ ಭಗವಂತ ನಮಗೆ ಒಂದು ಅವಕಾಶವನ್ನು ಕೊಟ್ಟು ಕಳುಹಿಸುತ್ತಾನೆ. ಹಾಗೆಯೇ ಈ ಕ್ಷೇತ್ರದ ಸಂತೋಷ ಭಟ್ ಗುರೂಜಿ ಸಮಾಜ ಸೇವೆಗಾಗಿ ತಮ್ಮನ್ನೇ ತಾವು ತೊಡಗಿಸಿಕೊಂಡು ಸೇವಾಮುಖಿಯಾಗಿರುವುದು ಅವರ ಕರ್ತವ್ಯ ದಕ್ಷತೆಗೆ ಇಂದು ನಡೆದ ಉಚಿತ ಗೋಭಾಗ್ಯ ವಿತರಣೆ ಮತ್ತು ಸಾಧಕ ಗಣ್ಯರ ಅಭಿನಂದನಾ ಗೌರವ ಸನ್ಮಾನ ಸಮಾರಂಭವೇ ಸಾಕ್ಷಿಯಾಗಿದೆ ಎಂದು ನೆಗಳೂರು ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಅವರು ರವಿವಾರ ತಾಲೂಕಿನ ದೇವರಗುಡ್ಡ ಗ್ರಾಮದ ಸುಕ್ಷೇತ್ರ ಮಾಲತೇಶ ಮಾಲಸಾಂಬಾ ಕಲ್ಯಾಣ ಮಂಟಪದಲ್ಲಿ ನಡೆದ ಸಂತೋಷ ಭಟ್ ಗುರೂಜಿಯವರ 45ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ ಉಚಿತ ಗೋಭಾಗ್ಯ ವಿತರಣೆ, ಸಾಧಕ ಗಣ್ಯರಿಗೆ ಯಾಲಕ್ಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಸುಕ್ಷೇತ್ರ ದೇವರಗುಡ್ಡ ಹಿ ಗುಡ್ಡಗುಡ್ಡಾಪುರ ಗ್ರಾಮದಲ್ಲಿರುವ ಶ್ರೀ ಮಾಲತೇಶ ಸ್ವಾಮಿಯ ದೇಗುಲಕ್ಕೆ ಸಾವಿರಾರು ವರ್ಷದ ಭವ್ಯ ಇತಿಹಾಸ ಪರಂಪರೆ ಇದೆ. ಸುಕ್ಷೇತ್ರ ಬಹಳಷ್ಟು ಬದಲಾವಣೆ ಮತ್ತು ಅಭಿವೃದ್ಧಿ ಕಾಣುತ್ತಿರುವುದು ಹಿರೇಮಠದ ಶ್ರೀಗಳಿಗೆ ಸಂತೋಷ ತಂದಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂತೋಷ್ ಭಟ್ ಗುರೂಜಿ ಅವರು ಸುಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜ ಸೇವಾ ಕಾರ್ಯಗಳು ನಡೆಯಲು ಆ ಸ್ವಾಮಿಯ ಪ್ರೇರಣೆ. ಕೋವಿಡ್ ಸಂದರ್ಭದಲ್ಲಿ ಈ ಭಾಗದ ಬಡತನದ ರೇಖೆಯಲ್ಲಿರುವ ಜನ ಸಾಮಾನ್ಯರಿಗೆ ಅವರಿಗೆ ಬೇಕಾಗುವಂತಹ ನಿತ್ಯದ ಊಟೋಪಚಾರ, ದವಸ ಧಾನ್ಯ, ವಸ್ತ್ರ ಸೇರಿದಂತೆ ಆರ್ಥಿಕ ಸಹಾಯ ಒದಗಿಸಿದ್ದೇವೆ. ಇದರಿಂದ ತಮಗೆ ತಮ್ಮ ಕುಟುಂಬಕ್ಕೆ ಅತ್ಯಂತ ಮಾನಸಿಕ ಶಾಂತಿ, ನೆಮ್ಮದಿ ತಂದಿದೆ. ಮೂರು ವರ್ಷಗಳಿಂದ ಸ್ವಾಮಿಯ ಕೃಪಾ ಕಟಾಕ್ಷದಿಂದ ತಮ್ಮ ಕೈಲಾದ ಮಟ್ಟಿಗೆ ಸಹಾಯ ನೀಡಿದ್ದೇವೆಯೇ ಹೊರತು ಇದರಲ್ಲಿ ನಮ್ಮದೇನೂ ಇಲ್ಲ. ಎಲ್ಲವೂ ಭಗವಂತನ ಇಚ್ಚೆ ಎಂದರು.
ಸಮಾರಂಭ ಉದ್ಘಾಟಿಸಿದ ಹಾವೇರಿ ಶಾಸಕ, ರಾಜ್ಯ ಅನುಸೂಚಿತ ಜಾತಿ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ನೆಹರೂ ಓಲೇಕಾರ ಅವರು, ಸುಕ್ಷೇತ್ರಕ್ಕೆ ರಾಜ್ಯವೂ ಸೇರಿದಂತೆ ಬೇರೆ ರಾಜ್ಯಗಳ ಭಕ್ತರು ಇಲ್ಲಿ ಬರುವುದು ಸರ್ವೇ ಸಾಮಾನ್ಯ. ಈ ಹಿಂದೆಗಿಂತಲೂ ಇಂದು ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಇದರಿಂದ ಭಕ್ತರಿಗೆ ಅನುಕೂಲವಾಗಿದೆ. ಮತ್ತಷ್ಟು ಅಭಿವೃದ್ಧಿಪರವಾದ ಕೆಲಸ ಕಾರ್ಯಗಳು ನಡೆಯಬೇಕೆನ್ನುವ ಸದಾಶಯ ತಮ್ಮದಾಗಿದ್ದು, ಇದಕ್ಕೆ ತಮ್ಮಿಂದ ಯಾವ ರೀತಿ ಸಹಾಯ ಬೇಕು ಅದನ್ನು ತಾವು ಕಾಯಾ ವಾಚಾ ಮನಸಾ ನೆರವೇರಿಸುವುದಾಗಿ ನೆರೆದ ಜನಸಮುದಾಯದ ಮಧ್ಯೆ ಹೇಳಿದರು.
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ ಅವರು ಉಚಿತ ಗೋಭಾಗ್ಯ ಪಡೆದ ಫಲಾನುಭವಿಗಳಿಗೆ ವಿತರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ಹಿರೇಕೆರೂರ ಮಾಜಿ ಶಾಸಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಬಿಇಓ ಎನ್.ಜೆ.ಗುರುಪ್ರಸಾದ, ಹಾವೇರಿಯ ಪವನ್ ದೇಸಾಯಿ ಮತ್ತಿತರರು ಮಾತನಾಡಿದರು.
ವೇದಿಕೆಯಲ್ಲಿ ನಿಂಗಪ್ಪ ಮುದ್ದಿ, ಗ್ರಾಪಂನ ಗದಿಗೆಪ್ಪ ಛಲವಾದಿ, ನೀಲಪ್ಪ ವಾರಸುದಾರ, ಸುರೇಶ್, ಕರಬಸಪ್ಪ ಸತಗಿ, ಬಸಪ್ಪ, ವಿ.ಎಂ.ಪತ್ರಿ, ಎಸ್.ಸಿ.ಷಡಕ್ಷರಿಮಠ ಮತ್ತು ಗ್ರಾಮದ ಅನೇಕ ಗಣ್ಯರು, ಪಂಚಾಯಿತಿ ಸದಸ್ಯರು, ಗುರೂಜಿಯವರ ಅಭಿಮಾನಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಯುವ ಮುಖಂಡರು ಉಪಸ್ಥಿತರಿದ್ದರು.
ಕಲಾವಿದ ಶಿವಬಸವ ಬಣಕಾರ ಪ್ರಾರ್ಥಿಸಿದರು. ಶಿಕ್ಷಕ ಸುರೇಶ್ ಕರೂರು ಸ್ವಾಗತಿಸಿದರು. ಜಿ.ಬಿ.ಮಾಳಗುಡ್ಡಪ್ಪನವರ ನಿರೂಪಿಸಿ ವಂದಿಸಿದರು.