ಮುಕ್ತಿಧಾಮದ ಮುಂದೆ ಕೊಳಚೆ ಸ್ಥಿತಿ
ಗುಳೇದಗುಡ್ಡ 05: ಗುಳೇದಗುಡ್ಡದ ಬಸವೇಶ್ವರ ನಗರದಲ್ಲಿರುವ ಸಾರ್ವಜನಿಕ ಮುಕ್ತಿ ಧಾಮದ ಎದುರಿಗೆ ನಿತ್ಯ ನರಕಯಾತನೆ. ಅಕ್ಕಪಕ್ಕದ ಜನ ಮನೆಯಲ್ಲಿನ ಕಸ ತಂದು ಇಲ್ಲಿ ಚಲ್ಲುತ್ತಾರೆ. ಇದರಿಂದ ಮುಕ್ತಧಾಮದ ಎದುರಿನ ಸ್ಥಳ ಕೊಳಚೆಯಾಗಿ ಪರಿಣಮಿಸಿದೆ. ಮುಕ್ತಧಾಮಕ್ಕೆ ಬರುವ ಜನ ಹಿಡಿಶಾಪ ಹಾಕುವಂತಾಗಿದೆ.
ಹೌದು. ಪಟ್ಟಣದ ಬಸವೆಶ್ವರ ನಗರದಲ್ಲಿ ಇರುವ ಸಾರ್ವಜನಿಕ ಹಿಂದೂ ಮುಕ್ತಿಧಾಮವನ್ನು ಅಚ್ಚುಕಟ್ಟಾಗಿ ಗಾರ್ಡ್ನ್ ತರಹ ಮಾಡಬೇಕೆಂಬುವ ಬಯಕೆಯಿಂದ ಸಮಿತಿಯವರು ನಿತ್ಯ ಸಾರ್ವಜನಿಕರಿಗೆ ಮುಕ್ತಿಧಾಮದ ಎದುರುಗಡೆ ಸ್ವಚ್ಚತೆ ಕಾಪಾಡಲು ಮನವಿ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ. ನಿತ್ಯ ಹತ್ತಾರು ಮನೆಯವರು ಕಸ ತಂದು ಹಾಕುತ್ತಾರೆ. ಇದರಿಂದ ಮುಕ್ತಿಧಾಮದ ಎದುರಿನ ಸ್ಥಳ ಕೊಳಚೆಯಾಗಿ ಪರಿಣಮಿಸಿದೆ. ದುರ್ಗಂಧ ವಾಸನೆ ರಸ್ತೆ ಮೇಲೆ ಹೋಗುವವರಿಗೆ ತಲೆನೋವಾಗಿ ಪರಿಣಮಿಸಿದೆ.
ಪುರಸಭೆ ನಿರ್ಲಕ್ಷ್ಯ: ಕಳೆದ ಸುಮಾರು ದಿನಗಳಿಂದ ಈ ರೀತಿ ಮುಕ್ತಿಧಾಮದ ಮುಂದೆ ಜನ ಹೊಲಸು ಮಾಡುತ್ತದ್ದರೂ ಪುರಸಭೆ ಮಾತ್ರ ಕ್ಯಾರೇ ಅನ್ನುತ್ತಿಲ್ಲ. ನಿತ್ಯ ಆ ಸ್ಥಳವನ್ನು ಪುರಸಭೆ ಸ್ವಚ್ಚ ಮಾಡುತ್ತಿಲ್ಲ. ಜನ ಹಸಿಕಸ ಚಲ್ಲುತ್ತಿರುವುದರಿಂದ ಮುಕ್ತಿಧಾಮದಲ್ಲಿ ಹಾಗೂ ಅದರ ಹೊರಗಡೆ ನೂರಾರು ಹಂದಿಗಳ ಕಾಟವೂ ಹೆಚ್ಚಾಗಿದೆ. ಪುರಸಭೆ ಮುಖ್ಯಾಧಿಕಾರಿ ಒಂದು ಸಲವೂ ಈ ಸ್ಥಿತಿಯನ್ನು ಬಂದು ನೋಡುತ್ತಿಲ್ಲವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಒಳಗಡೆ ಗಾರ್ಡನ್ ಹೊರಗಡೆ ದುರ್ಗಂಧ ವಾಸನೆ : ಮುಕ್ತಿಧಾಮದ ಸಮಿತಿಯವರು ಒಳಗಡೆ ನೂರಾರು ಗಿಡಗಳನ್ನು ಹಾಗೂ ಹೂವಿನ ಸಸಿಗಳನ್ನು ನೆಟ್ಟು ಮುಕ್ತಧಾಮವನ್ನು ಸುಂದರ ತಾಣ ಮಾಡಲು ಪಣತೊಟ್ಟರೆ ಹೊರಗಡೆಯ ಸ್ಥಳ ಪುರಸಭೆ ನಿರ್ಲಲ್ಷ್ಯದಿಂದ ಸಾರ್ವಜನಿಕರ ಕೆಂಗೆಣ್ಣಿಗೆ ತುತ್ತಾಗಿದೆ. ಮುಖ್ಯಾಧಿಕಾರಿಗಳು ಹಾಗೂ ವಾರ್ಡ್ ಸದಸ್ಯರು ಈ ಸ್ಥಳವನ್ನೊಮ್ಮೆ ವೀಕ್ಷಿಸಿ ಅಕ್ಕಪಕ್ಕದ ಜನರಿಗೆ ಹಸಿಕಸ ಚೆಲ್ಲದಂತೆ ಕ್ರಮಕ್ಕೆ ಮುಂದಾಗಬೇಕು. ನಿತ್ಯ ಅದನ್ನು ಸ್ವಚ್ಚಗೊಳಿಸಿ ಮುಕ್ತಿದಾಮಕ್ಕೆ ಹಾಗೂ ಈಮರಸ್ತೆ ಮೇಲೆ ಸಂಚರಿಸುವವರಿಗೆ ಈ ದುರ್ಗಂಧದ ಕೊಳಚೆ ಅನಾರೋಗ್ಯ ಹರಡದಂತೆ ಕ್ರಮಕೈಗೋಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮುಕ್ತಿಧಾಮವನ್ನು ಸಾರ್ವಜನಿಕರ ವಾಯುವಿಹಾರದ ಸ್ಥಳದಂತೆ ಮಾಡಲು ಕಷ್ಟ ಪಡುತ್ತಿದ್ದೇವೆ. ಆದರೆ ಅಕ್ಕಪಕ್ಕದ ಜನ ಮಾತ್ರ ಮುಕ್ತಿಧಾಮದ ಎದುರುಗಡೆ ನಿತ್ಯ ಹಸಿಕಸ ಚೆಲ್ಲಿ ಗಬ್ಬುನಾರುವಂತೆ ಮಾಡುತ್ತಿದ್ದಾರೆ. ಇದಕ್ಕೆ ಪುರಸಭೆ ಕ್ರಮಕ್ಕೆ ಮುಂದಾಗಬೇಕು. ಈ ಸ್ಥಳದಲ್ಲಿ ಕೂಡುವ ಆಸನಗಳನ್ನು ಹಾಕಿದರೆ ಜನ ಕಸ ಚೆಲ್ಲುವುದಿಲ್ಲ
ಮುಕ್ತಿಧಾಮದ ಅಭಿವೃದ್ಧಿ ಸಮಿತಿ ಸದಸ್ಯರು, ಗುಳೇದಗುಡ್ಡ.