ಸರ್. ಸಿದ್ಧಪ್ಪ ಕಂಬಳಿ ಸಮಸಮಾಜ ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ: ಡಾ. ಈರಣ್ಣ ಇಂಜಗನೇರಿ
ಧಾರವಾಡ, 11 : ಸರ್. ಸಿದ್ಧಪ್ಪ ಕಂಬಳಿ ಅವರು ಆಗಿನ ಕಾಲದ ಜಾತಿಯಾಧಾರಿತ ಸಾಮಾಜಿಕ ತಾರತಮ್ಯವನ್ನು ತೊರೆದು ಹಾಕಿ ಸಮಸಮಾಜ ನಿರ್ಮಿಸುವಲ್ಲಿ ಶ್ರಮಿಸಿದ ಧೀಮಂತ ವ್ಯಕ್ತಿ ಎಂದು ಹಿರೇಮಲ್ಲೂರ ಈಶ್ವರನ್ ಕಾಲೇಜಿನ ಪ್ರಾಧ್ಯಾಪಕ ಡಾ. ಈರಣ್ಣ ಇಂಜಗನೇರಿ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಸರ್. ಸಿದ್ಧಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸರ್. ಸಿದ್ಧಪ್ಪ ಕಂಬಳಿ ಪ್ರತಿಷ್ಠಾನ ದತ್ತಿ ಕಾರ್ಯಕ್ರಮದಲ್ಲಿ ‘ಸರ್. ಸಿದ್ಧಪ್ಪ ಕಂಬಳಿ ಅವರ ಸಾಮಾಜಿಕ ನ್ಯಾಯ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಶಿಕ್ಷಣ ಸಕಲ ಸಮಸ್ಯೆಗಳಿಗೆ ಸಂಜೀವಿನಿ ಎಂದು ತಿಳಿದ ಸರ್. ಸಿದ್ಧಪ್ಪ ಕಂಬಳಿ ಶಿಕ್ಷಣದಿಂದ ವಂಚಿತರಾದ ಅವಕಾಶ ಹೀನರಿಗೆ ಯಾವುದೇ ಜಾತಿಯ ತಾರತಮ್ಯವಿಲ್ಲದೇ ಅವಕಾಶ ಕಲ್ಪಿಸಿದ್ದರು. ಡಾ. ಬಿ. ಆರ್. ಅಂಬೇಡ್ಕರ ಅವರ ಕಾನೂನು ಪಾಂಡಿತ್ಯವನ್ನು ಪರಿಗಣಿಸಿ, ಮುಂಬೈ ಕಾನೂನು ಕಾಲೇಜನಲ್ಲಿ ಉಪನ್ಯಾಸಕ ಹುದ್ದೆ ಬದಲು ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಿ ಕಾಲೇಜಿನ ಘನತೆ ಹೆಚ್ಚಿಸಿದರು. ಯಾವುದೇ ಜಾತಿಯವರು ಸಹಾಯ ಕೇಳಿ ಬಂದರೂ ಅವರನ್ನು ಎಂದಿಗೂ ಬರಿಗೈಯಲ್ಲಿ ಕಳಿಸಲಿಲ್ಲ. ಬಡತನದಲ್ಲಿ ಹುಟ್ಟಿ ಬೆಳೆದ ಅವರು ತಮ್ಮ ಸಾಧನೆಯ ಬಲದಿಂದ ಉನ್ನತ ಮಟ್ಟಕ್ಕೇರಿ ಮುಂಬೈ ಸರ್ಕಾರದಲ್ಲಿ 7 ಇಲಾಖೆಗಳ ಮಂತ್ರಿಗಿರಿಯನ್ನು ಸಮರ್ಥವಾಗಿ ಹಾಗೂ ಕಾರ್ಯತತ್ವರತೆಯಿಂದ ನಿರ್ವಹಿಸಿದರು.
ಸರ್. ಸಿದ್ಧಪ್ಪ ಕಂಬಳಿ ಅವರು ಯಾವುದೇ ಜಾತಿ, ಮತ, ಪ್ರದೇಶ ಮೀರಿ ಬೆಳೆದವರಾಗಿದ್ದರು. ಶಾಸನ ಸಭೆಯಲ್ಲಿ ಅವರು ಅಧಿಕಾರವತ್ತಾಗಿ ಮಾತನಾಡ ಬಲ್ಲವರಾಗಿದ್ದರು. ಅವರ ಮಾತುಗಳಲ್ಲಿ ನಡೆ-ನುಡಿಯಲ್ಲಿ ಗಾಂಭಿರ್ಯ ಇರುತ್ತಿತ್ತು. ಸ್ವತಃ ನೆಹರು ಹಾಗೂ ಪಟೇಲರು ಚುನಾವಣೆಯಲ್ಲಿ ಇವರನ್ನು ಸೋಲಿಸಲು ಪ್ರಚಾರ ಮಾಡಿದರೂ ಅದೀಕ ಮತ ಪಡೆದು ಇತಿಹಾಸ ನಿರ್ಮಿಸಿದರು. ಇದು ಅವರ ಜನ ಮನ್ನಣೆಗೆ ಸಾಕ್ಷಿ. ಅವರ ದಿವ್ಯ ವ್ಯಕ್ತಿತ್ವದ ಮುಂದೆ ಎಂಥವರಾದರೂ ಸರಿ ತಲೆಬಾಗಲೇಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವಿ. ಕುಲಪತಿ ಡಾ. ಕೆ.ಬಿ. ಗುಡಸಿ ಮಾತನಾಡಿ, ಸರ್. ಸಿದ್ಧಪ್ಪ ಕಂಬಳಿ ಅವರ ಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನವಿರದಿದ್ದರೆ ಧಾರವಾಡ ವಿದ್ಯಾಕಾಶಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಿಯವರೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜ ಇರುತ್ತದೆಯೋ ಅಲ್ಲಿಯವರೆಗೆ ಸರ್. ಕಂಬಳಿ ಅವರ ಹೆಸರು ಅಜರಾಮರ. ಅವರೊಬ್ಬ ಮುತ್ಸದ್ಧಿ ರಾಜಕಾರಣಿಗಳು, ರಾಜಕಾರಣಿಗಳಿಗೆ ಮಾದರಿ ಎಂದರು.
ಸರ್. ಸಿದ್ಧಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಆರ್. ಮಂಜುಳಾ ಮಾತನಾಡಿದರು.
ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಎಂ.ಎಂ. ಚಿಕ್ಕಮಠ, ರಾಮಚಂದ್ರ ಧೋಂಗಡೆ, ಕೆ.ಎಂ. ಅಂಗಡಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರಿದ್ದರು.