ವಚನಗಾಯನ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ
ಲೋಕದರ್ಶನ ವರದಿ
ಯರಗಟ್ಟಿ 01: ಶರಣ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಎಂ.ಎಲ್.ಇ.ಎಸ್. ಆಂಗ್ಲಮಾಧ್ಯಮ ಶಾಲೆಯಲ್ಲಿ ವಚನ ದಿನ ಕಾರ್ಯಕ್ರಮ ಜರುಗಿತು.
ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಉಮೇಶ ಬಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣರ ವಚನಗಳು ವೇದಗಳಿದ್ದಂತೆ. ವೇದಗಳ ಸಾರವನ್ನು ಕನ್ನಡದಲ್ಲಿ ನಮಗೆ ಶರಣರು ನೀಡಿದ್ದಾರೆ. ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪಾವನವಾಗುತ್ತದೆ.
ವಿದ್ಯಾರ್ಥಿ ದೆಸೆಯಿಂದಲೇ ವಚನಗಳನ್ನು ಹೇಳುವುದರಿಂದ ವಿದ್ಯಾರ್ಥಿಗಳು ಆದರ್ಶ ಜೀವನವನ್ನು ನಡೆಸಲು ಪ್ರೇರಣೆಯಾಗುತ್ತದೆ ಎಂದರು.
ಶಿಕ್ಷಕ, ಸಾಹಿತಿ ವೈ.ಬಿ.ಕಡಕೋಳ ಮಾತನಾಡಿ, ಶರಣರು ಎಲ್ಲರಿಗೂ ಕಾಯಕ ದಾಸೋಹ ಹಾಗೂ ಸಮಾನತೆಯ ತತ್ವವನ್ನು ಸರಳವಾಗಿ ತಿಳಿಸುವುದರ ಜೊತೆಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆ ನಡೆದರು ಎಂದರು.
ಪ್ರಧಾನ ಗುರು ಎಸ್.ಎಸ್. ಉಪ್ಪಾರ, ಕಿರಣ ನಾಯ್ಕರ, ಜೆ.ಎನ್.ನದಾಫ, ಎ.ವಿ.ನರಗುಂದ, ಶೀತಲ್ ಮಲಗೌಡ್ರ, ಗೀತಾ ಪಾಟೀಲ ಇತರರಿದ್ದರು. ವಚನ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ನಿರ್ಮಲಾ ಗದ್ವಾಲ್ ಸ್ವಾಗತಿಸಿದರು. ಬಿ.ಎಂ. ಬಸವರಾಜ ನಿರೂಪಿಸಿದರು. ರಾಜಶೇಖರ ಮಲ್ಲಾಪೂರಮಠ ವಂದಿಸಿದರು.