ಸಿಂಧಗಿ ಕ್ಷೇತ್ರ , ಜೆಡಿಎಸ್ ನಡುವೆ ಕರುಳುಬಳ್ಳಿ ಸಂಬಂಧ: ಹೆಚ್.ಡಿ. ಕೆ
ಸಿಂಧಗಿ,ಅ 19: ಸಿಂಧಗಿ ಕ್ಷೇತ್ರ ಮತ್ತು ಹೆಚ್.ಡಿ.ದೇವೇಗೌಡರ ಕುಟುಂಬ ಮತ್ತು ಜೆಡಿಎಸ್ ನಡುವೆ ವಾತ್ಸಲ್ಯಪೂರ್ಣ, ಕರುಳುಬಳ್ಳಿಯ ಸಂಬಂಧವಿದೆ ಎಂದು ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸಿಂಧಗಿ ಕ್ಷೇತ್ರದ ಹೊಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡಿ ಮಾತನಾಡಿದರು. ಸುಮಾರು 30 ವರ್ಷಗಳ ಕಾಲ ದಿವಂಗತ ಮನಗೂಳಿ ಕಾಕಾ ದೇವೇಗೌಡರ ಕುಟುಂಬದ ಸದಸ್ಯರಂತೆ ಇದ್ದರು. ಅವರನ್ನು ದೇವೇಗೌಡರು ಸ್ವಂತ ಸಹೋದರನಂತೆ ನೋಡುತ್ತಿದ್ದರು. 7 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡು ಸಲ ಗೆದ್ದ ಅವರನ್ನು ಎರಡೂ ಸಲವೂ ಪಕ್ಷ ಮಂತ್ರಿ ಮಾಡಿತ್ತು ಎಂದು ಹಳೆ ಕತೆ ಮೆಲಕು ಹಾಕಿದರು.
ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಆಗಿದ್ದಾಗ ದೇವೇಗೌಡರು ಸಿಂಧಗಿ ಕ್ಷೇತ್ರಕ್ಕೆ ಅನೇಕ ಯೋಜನೆಗಳನ್ನು ನೀಡಿ, ನೀರಾವರಿ ಯೋಜನೆಗಳನ್ನು ಜಾರಿ ಮಾಡಿದ್ದರು. ಅದಕ್ಕೆ ಕುರುಹಾಗಿ ದೇವೇಗೌಡರು ಮತ್ತು ಮನಗೂಳಿ ಅವರಿಬ್ಬರ ಪ್ರತಿಮೆಗಳನ್ನು ಜನರು ಕೃತಜ್ಞತಾಪೂರ್ವಕವಾಗಿ ಇಲ್ಲಿ ಸ್ಥಾಪನೆ ಮಾಡಿದ್ದಾರೆ
ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಯ ಗತಿ ಇಲ್ಲದೆ ಮನಗೂಳಿ ಕಾಕಾ ಅವರ ಪುತ್ರನನ್ನು ಹೈಜಾಕ್ ಮಾಡಿ ಅಭ್ಯರ್ಥಿ ಮಾಡಿಲಾಗಿದೆ. ಅವರ ಜನಪ್ರಿಯತೆ, ಅವರು ಮಾಡಿದ ಸೇವೆ ಹಾಗೂ ಸಿಂಧಗಿ ಕ್ಷೇತ್ರಕ್ಕೆ ಜೆಡಿಎಸ್ ಕೊಟ್ಟಿರುವ ಕೊಡುಗೆಯನ್ನು ಯಾರೊಬ್ಬರು ಹೈಜಾಕ್ ಮಾಡಲಾಗದು ಎಂದು ರಾಜಕೀಯ ವಿರೋಧಿಗಳಿಗೆ ಕುಟುಕಿದರು
ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಯಾವ ನಾಲಿಗೆಯಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಮ್ ಎನ್ನುತ್ತಿದ್ದರೂ ಅದೇ ನಾಯಕರೂ ಕಳೆದ ಚುನಾವಣೆ ನಂತರ ಸರಕಾರ ಮಾಡಬೇಕು ಎಂದು ನಮ್ಮ ಪಕ್ಷದ ಬಾಗಿಲಲ್ಲಿ ನಿಂತಿದ್ದರು.
ಸಿಂಧಗಿ ಕ್ಷೇತ್ರದಲ್ಲಿ ಹಣಾಹಣಿ ಇರುವುದು ಜೆಡಿಎಸ್ ಮತ್ತು ಬಿಜೆಪಿ ನಡುವೆ ಮಾತ್ರ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿತ್ತು. ಯಾವ ಚುನಾವಣೆಯಲ್ಲಿಯೂ ಇಲ್ಲಿ ಆ ಪಕ್ಷ ಎರಡನೇ ಸ್ಥಾನಕ್ಕೆ ಬಂದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.