ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸಿದ್ದೇಶ್ವರ ಶ್ರೀ: ಅಧ್ಯಕ್ಷ ಬಸವಲಿಂಗ ಶ್ರೀ
ಇಂಡಿ: ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ , ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರು ಸಿದ್ಧೇಶ್ವರ ಸ್ವಾಮಿಗಳು. ಇವರು ಸಂತರಷ್ಟೇ ಅಲ್ಲ, ಜ್ಞಾನೋಪಾಸಕರು ಕೂಡ. ವಿಜಯಪುರದ ಜ್ಞಾನಯೋಗಾಶ್ರಮವು ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರವಾಗಿದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಗುರುವಾರ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಜರುಗಿದ ಸಿದ್ದೇಶ್ವರ ಮಹಾಸ್ವಾಮಿಗಳ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲಗಾಂವದ ಅಮೃತಾನಂದ ಸ್ವಾಮಿಗಳು ಮಾತನಾಡಿ, ಸಿದ್ದೇಶ್ವರ ಸ್ವಾಮಿಜಿಯವರು ಸರಳವಾದ ಸ್ಪೂರ್ತಿದಾಯಕ ಜೀವನ ಶೈಲಿಯನ್ನು ಹೊಂದಿದ್ದರು. ತತ್ವಜ್ಞಾನಿ, ಆಲೋಚಕ ಸ್ವಾಮೀಜಿಗಳಾದ ಅವರು ಪ್ರಪಂಚದಾದ್ಯಂತ ಆಧ್ಯಾತ್ಮಿಕ ಪ್ರವಚನಗಳನ್ನು ನೀಡಿದ್ದು, ನಮಗೆಲ್ಲ ದಾರಿದೀಪವಾಗಿವೆ ಎಂದು ಹೇಳಿದರು.
ಡಾ.ಶ್ರದ್ಧಾನಂದ ಸ್ವಾಮಿಜಿ ಮಾತನಾಡಿ, ವೇದಾಂತ, ಗೀತಾ, ಯೋಗಸೂತ್ರ, ವಚನಗಳ ಕುರಿತಾದ ಶ್ರೀಗಳ ಉಪನ್ಯಾಸಗಳು ಅವುಗಳ ಮೂಲತೆ, ಚಿಂತನೆ, ಅಭಿವ್ಯಕ್ತಿಗಾಗಿ ಹೆಸರುವಾಸಿಯಾಗಿವೆ ಎಂದು ಹೇಳಿದರು.
ತಿಕೋಟದ ಚೆನ್ನಮಲ್ಲಿಕಾರ್ಜು ನ ಸ್ವಾಮಿಗಳು ಮಾತನಾಡಿ, ಸಿದ್ದೇಶ್ವರ ಶ್ರೀಗಳು ಕನ್ನಡ ಸಂಸ್ಕೃತ ಹಿಂದಿ, ಇಂಗ್ಲಿಷ್ ಮರಾಠಿ, ಪಷರ್ಿಯನ್ ಹೀಗೆ ಆರು ಭಾಷೆಗಳಲ್ಲಿ ನಿರರ್ಗಳವಾಗಿ ಪ್ರವಚನವನ್ನು ಮಾಡುತ್ತಿದ್ದರು. ನಾನು ನನ್ನದು ಎನ್ನುವಂತಹ ಅಹಂಕಾರ ಸಲ್ಲದು ಎಲ್ಲರೂ ಒಂದೇ ಅಂತ ಸಾರುತ್ತ ಅದರಂತೆ ನಡೆದ ಅಪರೂಪದ ಯೋಗಿಗಳು ನಮ್ಮ ಸಿದ್ದೇಶ್ವರ ಸ್ವಾಮೀಜಿಗಳು ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಪ್ರವಚನವನ್ನೇ ಉಸಿರಾಗಿಸಿಕೊಂಡು ಮನುಕುಲದ ಉದ್ಧಾರಗೈದವರು. ಬುದ್ಧಿಜೀಯವರು ಜಗದ ಇಡೀ ಮನುಕುಲಕ್ಕೆ ಜ್ಞಾನದ ಬುತ್ತಿಯನ್ನು ತಯಾರಿಸಿಟ್ಟಿದ್ದಾರೆ. ಆ ಜ್ಞಾನದ ಬುತ್ತಿಯಲ್ಲಿ ಬದುಕಿನ ಚಿಂತನೆಗಳು, ತತ್ವ ಸಂದೇಶಗಳಿದ್ದು, ಅವನ್ನು ಸೂರ್ಯ-ಚಂದ್ರ ಇರುವತನಕ ನಾವು ಅಳವಡಿಸಿಕೊಂಡು ಬದುಕು ಬಂಗಾರವಾಗಿಸಿಕೊಳ್ಳೋಣ ಎಂದು ಹೇಳಿದರು.
ಶಿಕ್ಷಕಿ ಎಸ್.ಎಸ್. ಬಡಿಗೇರ ನುಡಿನಮನ ಸಲ್ಲಿಸಿದರು. ಅಥರ್ಗಾ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.