ಶ್ರೀರಾಮಂದಿರ ಪ್ರಾಣ ಪ್ರತಿಷ್ಠಾಪನ ಅಭಿಯಾನ
ಲೋಕದರ್ಶನ ವರದಿ
ರಾಣಿಬೆನ್ನೂರ 17: ಜ.22ರಂದು ನಡೆಯಲಿರುವ ಅಯೋಧ್ಯ ಶ್ರೀರಾಮಮಂದಿರ ಉದ್ಘಾಟನಾ ನಿಮಿತ್ತ ಪ್ರತಿ ಮನೆಮನೆಗಳಿಗೂ ಅಕ್ಷತೆ ಕಾಳು ಹಾಗೂ ಶ್ರೀರಾಮನ ಪೋಟೋವನ್ನು ತಲುಪಿಸಿ ಆಹ್ವಾನಿಸಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕ ಕಾರ್ಯವಾಹ ಚಿಕ್ಕದೇವ ಕುಪ್ಪೇಲೂರ ಹೇಳಿದರು.
ಶನಿವಾರ ತಾಲೂಕಿನ ಉದಗಟ್ಟಿ ಗ್ರಾಮದ ಶ್ರೀ ವಿದ್ಯಾಶಂಕರ ಮಠದಲ್ಲಿ ಅಯೋಧ್ಯ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾಪನ ಅಭಿಯಾನದ ಮೇಡ್ಲೇರಿ ಹೊಬಳಿ ಬೈಠೇಕ್ ಸಭೆಯಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣಕ್ಕೆ ಸಾಧು ಸಂತರು, ರಾಷ್ಟ್ರೀಯ ಸ್ವಯಂ ಸೇವಕರು, ಹಾಗೂ ಅನೇಕ ಮಹಾ ಪುರುಷರು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದಾರೆ. ಆದರೆ ಅವರ ಹೋರಾಟದಿಂದ ರಾಮ ಮಂದಿರ ಜ.22 ರಂದು ಲೋಕಾರ್ಪಣೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಢ್ಲೇರಿ ಮಂಡಲ ಕಾರ್ಯವಾಹಕ ವಿಶ್ವನಾಥ ದೂಪದ ಮಾತನಾಡಿ, ತಾವೆಲ್ಲರೂ ಭಕ್ತಿಯಿಂದ ಮನೆಮನೆಗೂ ಅಕ್ಷತೆ ಕಾಳನ್ನು ವಿತರಿಸಿ ಆಹ್ವಾನಿಸಬೇಕು. ಹಾಗೂ ಪ್ರತಿ ಮನೆಗಳಲ್ಲೂ ರಾಮನಾಮ ಜಪ ಹಾಗೂ ಮನೆಗಳಲ್ಲಿ ಉದ್ಘಾಟನೆ ದಿನದಂದು 5 ದೀಪಗಳನ್ನು ಹಚ್ಚುವ ಮುಖಾಂತರ ಮತ್ತೊಮ್ಮೆ ದೀಪಾವಳಿಯನ್ನು ಆಚರಿಸಬೇಕೆಂದು ಅವರು ಮನವಿ ಮಾಡಿದರು.
ತಾಲೂಕಿನ ಹರನಗಿರಿ, ಮೇಡ್ಲೇರಿ, ಕುದರಿಹಾಳ, ಚಿಕ್ಕಅರಳಿಹಳ್ಳಿ, ಚಿಕ್ಕಕುರುವತ್ತಿ, ಉದಗಟ್ಟಿ, ಬೇಲೂರು, ಹೀಲದಹಳ್ಳಿ, ಚೌಡಯ್ಯದಾನಪುರ, ಕೊಣನತಂಬಿಗೆ ಸೇರಿದಂತೆ ಅನೇಕ ಗ್ರಾಮಗಳಿಂದ ಶ್ರೀರಾಮ ಭಕ್ತರು ಹಾಗೂ ಯುವಕರು ಬೈಠೆಕ್ನಲ್ಲಿ ಉಪಸ್ಥಿತರಿದ್ದರು