ಭಟ್ಟಡ ಅಗಲಿಕೆ ನೋವು ತಂದಿದೆ: ರವೀಂದ್ರ ಪಟ್ಟಣಶೆಟ್ಟಿ
ಗುಳೇದಗುಡ್ಡ 30: ಸಂಸ್ಥೆಯ ಸರ್ವತೋಮುಖದ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತಿದ್ದ ಜುಗಲಕಿಶೋರ ಭಟ್ಟಡ ಅವರ ಅಗಲಿಕೆಯಿಂದ ಪಿಇ ಟ್ರಸ್ಟಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಪಿಇ ಟ್ರಸ್ಟಿನ ಸಭಾ ಭವನದಲ್ಲಿ ಗುರುವಾರ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮೊಂದಿಗೆ ಸಾಕಷ್ಟು ಹುಡುಗಾಟದ ದಿನಗಳನ್ನು ಕಳೆದ ಭಟ್ಟಡ ಅವರು ಜಾತಿ, ಧರ್ಮವನ್ನು ಮೀರಿ ಮಾನವೀಯತೆಯ ನೆಲೆಯಲ್ಲಿ ಎಲ್ಲರೊಂದಿಗೆ ಬದುಕಿದರು. ಸಂಸ್ಥೆಯ ಸರ್ವತೋಮುಖದ ಅಭಿವೃದ್ಧಿಗೆ ಸದಾ ಸ್ಪಂದಿಸಿದರು. ಅವರ ಅಕಾಲಿಕ ಮರಣ ನಮಗೆ ನೋವು ತಂದಿದೆ. ಅವರ ಬದುಕು ಅನುಕರಣೀಯ ಎಂದು ಭಾವುಕರಾದರು.
ಪಿಯು ಕಾಲೇಜಿನ ಪ್ರಾಚಾರ್ಯ ಸಿದ್ದಲಿಂಗಪ್ಪ ಪಟ್ಟಣಶೆಟ್ಟಿ ಮಾತನಾಡಿ, ಬದುಕಿನಾಚೆ ಸಾವಿದೆಯೇ ಹೊರತು ಸಾವಿನಾಚೆ ಬದುಕಿರುವುದಿಲ್ಲ. ಸಾವು ಮನುಷ್ಯನದೇ ಆಗಿದ್ದರೂ ಜೀವನ ಒಂದು ಸಲ ಮುಗಿದು ಹೋಗುತ್ತದೆ. ಆದರೆ ಭಟ್ಟಡ ಅವರದು ಅಪರೂಪದ ಬದುಕು. ನಿತ್ಯ ಎಲ್ಲರೊಂದಿಗೆ ನಗುನಗುತ್ತಲೇ ಬದುಕಿ ಜೀವನ ಪಯಣ ಮುಗಿಸಿದರು ಎಂದು ಹೇಳಿದರು.
ನಿರ್ದೇಶಕರಾದ ಅಶೋಕ ಹೆಗಡಿ, ಸಂಗಣ್ಣ ಪಟ್ಟಣಶೆಟ್ಟಿ, ವಿಶ್ವನಾಥ ಅಂಗಡಿ, ಪುರುಷೋತ್ತಮ ಝಂವರ ವೇದಿಕೆ ಮೇಲಿದ್ದರು. ಸಭೆಯಲ್ಲಿ ವಿಶ್ರಾಂತ ಪ್ರಾಚಾರ್ಯ ಎಸ್.ಎಸ್.ನಾಯನೇಗಲಿ, ಪ್ರಾಚಾರ್ಯ ಡಾ.ಎನ್.ವೈ.ಬಡನ್ನವರ್, ಪ್ರಾಧ್ಯಾಪಕ ವೃಂದ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.