ವೀರಶೈವ ಧರ್ಮದಲ್ಲಿ ಲಿಂಗವೇ ಕೇಂದ್ರಶಕ್ತಿ
ಸಿಂದಗಿ: ಲಿಂಗತತ್ವವು ವೀರಶೈವಧರ್ಮದ ತಳಹದಿಯೂ ಹೌದು, ಹೊಂಗಳಶವೂ ಹೌದು. ವೀರಶೈವ ಧರ್ಮದಲ್ಲಿ ಸಾಮಾಜಿಕ, ನೈತಿಕ, ನಿಷ್ಠೆ ಇವುಗಳೆಲ್ಲಕ್ಕೂ ಲಿಂಗವೆ ಕೇಂದ್ರಶಕ್ತಿ. ಸಮಾಜದಲ್ಲಿ ಸರ್ವಸಮಾನತೆಯನ್ನು ಸಾಧಿಸುವುದಕ್ಕೆ ಲಿಂಗವೇ ಒಂದು ಸಾಧನ ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಎನ್. ಪಾಟೀಲ ಇಬ್ರಾಹಿಂಪೂರ ಹೇಳಿದರು.
ಪಟ್ಟಣದ ಸಾರಂಗಮಠದ ಆವರಣದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಬೆಂಗಳೂರು, ಅಖಿಲ ಭಾರತ ವೀರಶೈವ ಮಹಾಸಭಾ ವಿಜಯಪುರ ಮತ್ತು ಸಿಂದಗಿಯ ಪೂಜ್ಯಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ಸಾರಂಗಮಠ ಇವರ ಸಹಯೋಗದಲ್ಲಿ ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಮ್ಮೇಳನದಲ್ಲಿ ಅವರು ಇಷ್ಟಲಿಂಗ ಕುರಿತು ಉಪನ್ಯಾಸ ಮಾಡಿದರು.
ಗುರುವಿನಿಂದ ಪಡೆದು ದೇಹದ ಮೇಲೆ ಧರಿಸುವುದಕ್ಕೆ ಇಷ್ಟಲಿಂಗ. ಸಾಧಕನ ಅಂಗದ ಮೇಲಿರುವ ಲಿಂಗಚೈತನ್ಯದ ಕುರುಹು ಅಷ್ಟೇ. ಇಷ್ಟಲಿಂಗ ತನ್ನ ಶರೀರದಲ್ಲಿ ಚಿತ್ಕಲೆ ಮಾತ್ರ. ಅದೇ ಪ್ರಾಣಲಿಂಗ. ಈ ದೇಹದಿಂದ ಪ್ರಾಣವನ್ನು ಹೇಗೆ ತೆಗೆದಿಡಲಾಗುವುದಿಲ್ಲವೋ ಹಾಗೆ ಇಷ್ಟಲಿಂಗವನ್ನು ದೇಹದಿಂದ ಹೊರ ತೆಗೆದಿಡಬಾರದು. ದಿನವೂ ಇಷ್ಟಲಿಂಗವನ್ನು ಶ್ರದ್ಧೆಯಿಂದ ಪೂಜಿಸಬೇಕು. ಅಂಗೈಯೊಳಗೆ ಲಿಂಗವನ್ನಿರಿಸಿ ಪೂಜಿಸುವುದೇ ವೀರಶೈವ ಧರ್ಮದ ಮುಖ್ಯ ತಿರುಳು. ಗುರುವಾದವನು ತನ್ನ ಯೌಗಿಕ ಶಕ್ತಿಯಿಂದ ಇಷ್ಟಲಿಂಗವನ್ನಾಗಿಸಿ ಶಿಷ್ಯನ ಕರ-ಮನ-ಭಾವಗಳಲ್ಲಿ ನೆಲೆಗೊಳಿಸುತ್ತಾನೆ. ಕರದಲ್ಲಿ ಇಷ್ಟಲಿಂಗವನ್ನಾಗಿಸಿದರೆ ಮನದಲ್ಲಿ ಪ್ರಾಣಲಿಂಗವನ್ನಾಗಿಸುತ್ತಾನೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ ಯಡೆಯೂರು-ತಾವರೆಕೆರೆಯ ರೇಣುಕಾಚಾರ್ಯ ಮಹಾಸ್ವಾಮಿಗಳು, ಸಮ್ಮೇಳನಾಧ್ಯಕ್ಷರಾದ ಜಾಲಹಳ್ಳಿ ಸಂಸ್ಥಾನ ಬೃಹನ್ಮಠದ ವಿದ್ಯಾಮಾನ್ಯ ಶಿವಾಭಿನವ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನೇತೃತ್ವ ವಹಿಸಿದ ಸಾರಂಗಮಠ-ಗಚ್ಚಿಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸೋಲಾಪೂರ-ಹೊಟಗಿಯ ಡಾ.ಮಲ್ಲಿಕಾರ್ಜುನ ಶಿವಾಚಾರ್ಯರು, ಶಿವಗಂಗೆಯ ಡಾ.ಮಲಯಶಾಂತಮುನಿ ಶಿವಾಚಾರ್ಯರು, ಎಮ್ಮಿಗನೂರದ ವಾಮದೇವ ಮಹಾಂತ ಶಿವಾಚಾರ್ಯರು, ನರೇಗಲ್ಲ, ಸವದತ್ತಿಯ ಮಲ್ಲಿಕಾರ್ಜುನ ಶಿವಾಚಾರ್ಯರು, ಕೆರೂರ, ಡಾ.ಶಿವಕುಮಾರ ಶಿವಾಚಾರ್ಯರು, ಕೊಣ್ಣೂರದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಕನ್ನೊಳ್ಳಿಯ ಸಿದ್ಧಲಿಂಗ ಶಿವಾಚಾರ್ಯರು, ಕಲಕೇರಿಯ ಮಡಿವಾಳೇಶ್ವರ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಗಳ ಶಿವಾಚಾರ್ಯರು ವೇದಿಕೆ ಮೇಲೆ ಇದ್ದರು.
ಈ ಸಂದರ್ಭದಲ್ಲಿ ಪೂಜಾ ಹಿರೇಮಠ ಸಂಗೀತ ಸೇವೆ ಸಲ್ಲಿಸಿದರು. ಜಿಲ್ಲೆಯ ವಿವಿಧ ತಾಲೂಕಿನ ಹಳ್ಳಿಗಳಿಂದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.