ಶಿವಸಂಗಮ: ಬ್ಯಾಂಕಿಂಗ್‌ನ 16ನೇ ವಾರ್ಷಿಕೋತ್ಸವ
ರಾಣೇಬೆನ್ನೂರ 6:ಒಂದು ಸಂಸ್ಥೆಯಲ್ಲಿ ವಿನಯತೆ ಮತ್ತು ವಿದೇಯತೆ ಇರಬೇಕು. ಜನರ ವಿಸ್ವಾಸ ಗಳಿಸಯವುದು ಸುಲಭವಲ್ಲ. ಇವತ್ತಿನ ದಿನದಲ್ಲಿ ಹಣಕಾಸಿನ ವಿಚಾರದಲ್ಲಿ ನಂಬಿಕೆ ಗಳಿಸಿಕೊಂಡು, ಉಳಿಸಿಕೊಂಡು ಹೋಗುವುದು ಸಾಮಾನ್ಯ ಸಂಗತಿ ಅಲ್ಲ ಎಂದು ನಗರದ ಮಕ್ಕಳ ತಜ್ಞ ಡಾ.ಪ್ರವೀಣ್ ಖನ್ನೂರ್ ಹೇಳಿದರು.
ನಗರದ ಶ್ರೀ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಸಂಗಮ ಗ್ರೂಪ್ಸ್ ನ ಶಿವಸಂಗಮ ಚಿಟ್ಸ್, ಫೈನಾನ್ಸ್, ಬ್ಯಾಂಕಿಂಗ್‌ನ 16ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಸಂಗಮ ಸಂಸ್ಥೆ ಗ್ರಾಹಕರಿಗೆ ವಿಶ್ವಾಸ ಹಾಗೂ ಭರವಸೆ ಮೂಡಿಸಿದೆ. ಈ 16ವರ್ಷದಲ್ಲಿ 50ಸಾವಿರಕ್ಕೂ ಹೆಚ್ಚು ಗ್ರಾಹಕ ಅಭಿಮಾನಿಗಳನ್ನು ಶಿವಸಂಗಮ ಹೊಂದಿದೆ. ಇಂದು ಉಳಿತಾಯದ ಮೂಲಕ ಶಿಸ್ತುಬದ್ಧ ಜೀವನ ನಡೆಸಬೇಕು. ಶಿವಸಂಗಮ ಕೇವಲ ಉಳಿತಾಯಕ್ಕೆ ಮಹತ್ವ ನೀಡದೇ ಸೇವೆಗೂ ಆದ್ಯತೆ ನೀಡಿದೆ. ಸಾಲ ಪಡೆದರೇ ಸಾಲದು, ಅದಕ್ಕೆ ಪೂರಕವಾದ ಇನ್ಸೂರನ್ಸ್ ಬಗ್ಗೆ ಗ್ರಾಹಕರು ಜಾಗೃತರಾಗಬೇಕು. ಖರ್ಚು ಮತ್ತು ಉಳಿತಾಯದ ಬಗ್ಗೆ ಬಹಳಷ್ಟು ಶಿಸ್ತುಬದ್ಧ ಯೋಚನೆ ಎಲ್ಲರಲ್ಲೂ ಇರಬೇಕು. ಆಡಳಿತ ಮಂಡಳಿಯಲ್ಲಿ ಕ್ರೀಯಾಶೀಲತೆ ಇದ್ದರೆ ಸಾಲದು, ಸಿಬ್ಬಂದಿಗಳಲ್ಲಿ ಸಂಸ್ಥೆ ನನ್ನದು ಎನ್ನುವ ಭಾವ ಮೂಡಿದಾಗ ಮಾತ್ರ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಗದಗಿನ ಶಿವಾನಂದ ಮಠದ ಜ.ಅಭಿನವ ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶಿವಸಂಗಮ ಸಂಸ್ಥೆ ಬಹಳಷ್ಟು ಕಡಿಮೆ ಅವಧಿಯಲ್ಲಿ ಗ್ರಾಹಕ ಸ್ನೇಹಿಯಾಗಿ ಬೆಳೆದಿದೆ. ರಾಜ್ಯಾದ್ಯಂತ ಶಾಖೆಗಳನ್ನು ತೆರೆಯುವ ಮೂಲಕ ಗ್ರಾಹಕ ಸ್ನೇಹಿ ಸಂಸ್ಥೆಯಾಗಿಸುವಲ್ಲಿ ಸಂಸ್ಥೆ ಅಣಿಯಾಗಿದೆ ಎಂದರು.
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ಪ್ರಕಾಶಾನಂದಜೀ ಮಹಾರಾಜರು ಆಶೀರ್ವಚನ ನೀಡಿ, ಕಾಯಕ ಮತ್ತು ನಿಷ್ಠೆಗೆ ಮಹತ್ವವಿದೆ. ಎಲ್ಲ ದಾರ್ಶನಿಕರು ಈ ಬಗ್ಗೆ ಹೆಚ್ಚು ಒತ್ತುಕೊಟ್ಟು ಹೇಳಿದ್ದಾರೆ. ಯಾವುದೇ ಒಂದು ಸಂಸ್ಥೆ ಬೆಳವಣಿಗೆ ಹೊಂದಲು ತ್ಯಾಗ ಮತ್ತು ಬದ್ಧತೆ ಅವಶ್ಯಕವಾಗಿ ಬೇಕು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪಿಡಬ್ಲೂಡಿ ಇಲಾಖೆ ನಿವೃತ್ತ ಅಭಿಯಂತರ ಬಿ.ಎಸ್. ಪಾಟೀಲ್, ನಿವೃತ್ತ ಶಿಕ್ಷಕ ವೈ.ಕೆ. ಜ್ಯೋತಿ, ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷ ರಾಜಶ್ರೀ ಎ. ಸಜ್ಜೇಶ್ವರ ಸೇರಿದಂತೆ ಇತರರಿದ್ದರು.
ಇದೇ ಸಮಯದಲ್ಲಿ ಗ್ರಾಹಕರನ್ನು ಅಭಿನಂದಿಸಲಾಯಿತು. ಕಲಾಶಕ್ತಿ ಫೌಂಡೇಶನ್ ನಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜಿ.ಎಮ್. ಪಲ್ಲೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಣೇಬೆನ್ನೂರು ಶಾಖೆಯ ವ್ಯವಸ್ಥಾಪಕ ಬಸವರಾಜ್ ಬೆಂತೂರ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.