ಗುಳೇಗುಡ್ಡ

ನಂಜಯ್ಯನಮಠ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ: ಶೀಲವಂತ ಸ್ಪಷ್ಟನೆ

ನಂಜಯ್ಯನಮಠ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ: ಶೀಲವಂತ ಸ್ಪಷ್ಟನೆ

ಗುಳೇದಗುಡ್ಡ22: ಇತ್ತೀಚೆಗೆ ನಮ್ಮ ಪಕ್ಷದ ನಗರ ಸಮಿತಿ ಅಧ್ಯಕ್ಷ ವಸಂತಸಾ ದೋಂಗಡೆ ಹಾಗೂ ಪದಾಧಿಕಾರಿಗಳು  ಪತ್ರಿಕಾಗೋಷ್ಟಿಯಲ್ಲಿ ಗುಳೇದಗುಡ್ಡದ ಬಸ್ ಡಿಪೋವನ್ನು ನಮ್ಮ ಮಾಜಿ ಶಾಸಕರಾದ ರಾಜಶೇಖರ ಶೀಲವಂತ ಅವರು ಮಂಜೂರಿ ಮಾಡಿಸಿದ್ದಾರೆಂದು ತಿಳಿಸಿದ್ದಾರೆ. ಈ ಹೇಳಿಕೆಯನ್ನು ಜಿಲ್ಲಾ ಕಾಂಗ್ರಸ್ ಅಧ್ಯಕ್ಷರು ಹಾಗೂ ಮಾಜಿ ಶಾಸಕ  ಎಸ್‌. ಜಿ. ನಂಜಯ್ಯನಮಠ ಅವರು ನಾನೇ ಹೇಳಿಕೆ ನೀಡಿದ್ದೇನೆಂದು ತಪ್ಪಾಗಿ ಅರ್ಥೈಸಿಕೊಂಡು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ. ಗುಳೇದಗುಡ್ಡಕ್ಕೆ ಬಸ್ ಡಿಪೋ ಮಂಜೂರ ಆಗುವಲ್ಲಿ ಸದನದಲ್ಲಿ ನಡೆದ ಚರ್ಚೆ ಮತ್ತು ನನ್ನ ಪಾತ್ರದ ಬಗ್ಗೆ ಈ ಕೆಳಗಿನಂತೆ ಸ್ಪಷ್ಟಪಡಿಸ ಬಯಸುತ್ತೇನೆ ಎಂದು ಇಲ್ಲಿನ ಮಾಜಿಶಾಸಕ ರಾಜಶೇಖರ ತಿಳಿಸಿದ್ದಾರೆ. 

ಅವರು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿ, ನಾನು ಶಾಸಕನಾಗಿದ್ದಾಗ ವಿಧಾನಸಭೆ ಅಧಿವೇಶನದಲ್ಲಿ ಸಾರಿಗೆ ಸಚಿವರಾದ ಬಚ್ಚೇಗೌಡರ ಅವರಿಗೆ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುವಾಗ ಗುಳೇದಗುಡ್ಡದ ಬಸ್ ಡಿಪೋ ಮಂಜೂರಿ ವಿಷಯವಾಗಿ ಹಾರಿಕೆ ಉತ್ತರ ನೀಡಿದರು. ಬಿಜೆಪಿಯ ಆಗಿನ ಪ್ರತಿಪಕ್ಷ ನಾಯಕರಾದ ಬಿ. ಎಸ್‌. ಯಡಿಯೂರ​‍್ಪನವರು ಮಧ್ಯಪ್ರವೇಶಿಸಿ ಸಭಾಧ್ಯಕ್ಷ ರಮೇಶಕುಮಾರ ಅವರಿಗೆ ಒತ್ತಡ ಮಾಡಿ ಗುಳೇದಗುಡ್ಡಕ್ಕೆ ಬಸ್ ಡಿಪೋ ಮಂಜೂರ ಮಾಡಲು ಕೋರಿದರು. ಜೊತೆಗೆ ಸಾರಿಗೆ ಸಚಿವ ಬಚ್ಚೇಗೌಡ ಅರಿಗೂ ಒತ್ತಾಯ ಮಾಡಿದಾಗ ಸದನದಲ್ಲಿಯೇ ಬಸ್ ಡಿಪೋ ಮಾಡಲಿಕ್ಕೆ ಸಚಿವರು ಒಪ್ಪಿಗೆ ನೀಡಿದರು.  

ಈ ರೀತಿ ಗುಳೇದಗುಡ್ಡಕ್ಕೆ ಬಸ್ ಡಿಪೋ ಮಂಜೂರಿ ಆಗಿದೆ. ಮರುದಿನ ಗುಳೇದಗುಡ್ಡದಿಂದ ರಂಗಪ್ಪ ಶೇಬಿನಕಟ್ಟಿ, ಅಶೋಕ ಹೆಗಡೆ, ದಿ. ತಿಪ್ಪಣ್ಣ ಕೊಳ್ಳಿ, ದಿ. ಲಕ್ಷ್ಮಣಸಾ ಕಾವಡೆ, ರವಿ ಪಟ್ಟಣಶೆಟ್ಟಿ, ಮನೋಹರ ಶೆಟ್ಟರ ಅವರನ್ನು ಒಳಗೊಂಡ ಸರ್ವಪಕ್ಷದ ಹಿರಿಯರು ಎರಡು ಟಿಂಪೋಗಳಲ್ಲಿ ಬೆಂಗಳೂರಿಗೆ ಆಗಮಿಸಿ ಆಗಿನ ಸಾರಿಗೆ ಸಚಿವರಾದ  ಬಚ್ಚೇಗೌಡರಿಗೆ ನನ್ನ ಉಪಸ್ಥಿತಿಯಲ್ಲಿ ಅಭಿನಂದನೆ ಸಲ್ಲಿಸಿ ಬಂದಿದ್ದೇವೆ. ಈ ಎಲ್ಲ ಪ್ರಕ್ರಿಯೆ ನಡೆದಿದೆ. ಆಗಿನ ಸಂದರ್ಭದಲ್ಲಿ ಎಚ್‌. ವಾಯ್‌. ಮೇಟಿ ಅವರು ಸಂಸದರಾಗಿದ್ದರು. ರವೀಂದ್ರ ಕಲಬುರ್ಗಿ ಅವರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿದ್ದರು. ಸದನದಲ್ಲಿ ಬಸ್ ಡಿಪೋಕ್ಕೆ ಒಪ್ಪಿಗೆ ಸೂಚಿಸಿದ ನಂತರ ಎಸ್‌.ಜಿ.ನಂಜಯ್ಯನಮಠ ಅವರು ತಮ್ಮ ಸಹಕಾರ ನೀಡಿರಬಹುದು ಅದನ್ನು ನಾವು ಸ್ವಾಗತಿಸುತ್ತೇವೆ. ಅದರ ಬಗ್ಗೆ ನಮ್ಮದೇನು ಆಕ್ಷೇಪವಿಲ್ಲ. ಪುರಸಭೆಯವರು ಜಾಗೆ ನೀಡುವಲ್ಲಿ ಸಾಕಷ್ಟು ಮುತುವರ್ಜಿವಹಿಸದ್ದನ್ನೂ ಸಹ ಸ್ಮರಿಸಬೇಕಾಗಿದೆ. ನಂತರ ಶಾಸಕರಾದ ಎಸ್‌. ಜಿ. ನಂಜಯ್ಯನಮಠ ಅವರ ಅವಧಿಯಲ್ಲಿ ಡಿಪೋದ ಉದ್ಘಾಟನೆ ನಡೆದಿದ್ದೂ, ಅದಕ್ಕೆ ನಮ್ಮದು ಆಕ್ಷೇಪವಿಲ್ಲ. ನಾನು ಶಾಸಕನಾಗಿದ್ದ ಅವಧಿಯಲ್ಲಿ ವಿಶೇಷ ಪ್ರಯತ್ನ ಹಾಕಿ ಸದನದಲ್ಲಿ ಸಾರಿಗೆ ಸಚಿವರನ್ನು ಒಪ್ಪಿಸಿ ಬಸ್ ಡಿಪೋ ಮಂಜೂರಿ ಮಾಡಿಸಿದ್ದು ನಿಜ. ಬೇಕಿದ್ದರೆ ಸದನದ ನಡಾವಳಿ ನೋಡಿಲಿ ಎಂದು ರಾಜಶೇಖರ ಶೀಲವಂತ ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಅವರಿಗೆ ತಿಳಿಸಿದ್ದಾರೆ.   

ಸುದ್ದಿ ಓದಿ