ಶೇಡಬಾಳ ಪಟ್ಟಣ ಪಂಚಾಯತಿ ಮತ್ತೆ ಬಿಜೆಪಿ ತೆಕ್ಕೆಗೆ
ಅಧ್ಯಕ್ಷರಾಗಿ ಉತ್ಕರ್ಷ ಪಾಟೀಲ, ಉಪಾಧ್ಯಕ್ಷರಾಗಿ ದೀಪಾ ಹೊನಕಾಂಬಳೆ ಆಯ್ಕೆ..!!
ಕಾಗವಾಡ 27: ತಾಲೂಕಿನ ಶೇಡಬಾಳ ಪಟ್ಟಣ ಪಂಚಾಯತಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿಯ ಉತ್ಕರ್ಷ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ದೀಪಾ ಹೊನಕಾಂಬಳೆ ಅವೀರೋಧವಾಗಿ ಆಯ್ಕೆಗೊಂಡಿದ್ದು, ಪಟ್ಟಣ ಪಂಚಾಯತಿಯಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ.
ಮಂಗಳವಾರ ದಿ. 27 ರಂದು ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಪುರುಷ ಮತ್ತು ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿಯ 12 ಸದಸ್ಯರು, ಕಾಂಗ್ರೆಸ್ನ 2 ಸದಸ್ಯರು, ಜೆಡಿಎಸ್ ಮತ್ತು ಪಕ್ಷೇತರ ತಲಾ 1 ರಂತೆ ಒಟ್ಟು 16 ಜನ ಸದಸ್ಯರು ಚುನಾವಣೆ ಪ್ರಕ್ರೀಯೆಯಲ್ಲಿ ಭಾಗವಹಿಸಿದ್ದರು. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಉತ್ಕರ್ಷ ಭರತ ಪಾಟೀಲ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ದೀಪಾ ನಾಮದೇವ ಹೊನಕಾಂಬಳೆ ಈ ಇಬ್ಬರೇ ಸದಸ್ಯರು ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರ ಆಯ್ಕೆಯು ಅವಿರೋಧವಾಗಿದೆ ಎಂದು ಚುನಾವಣಾಧಿಕಾರಿಗಳಾದ ತಹಶೀಲ್ದಾರ ರಾಜೇಶ ಬುರ್ಲಿ ಘೋಷಣೆ ಮಾಡಿದರು.
ಘೋಷಣೆ ಹೊರ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿಹಂಚಿ, ಸಂಭ್ರಮಿಸಿದರು. ನಂತರ ತೆರೆದ ವಾಹನದಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ, ಗ್ರಾಮ ದೇವರಾದ ಬಸವಣ್ಣನ ದರ್ಶನ ಪಡೆದುಕೊಂಡಿತು. ಮುಂಜಾಗ್ರತಾ ಕ್ರಮವಾಗಿ ಕಾಗವಾಡ ಪಿಎಸ್ಐ ಜಿ.ಜಿ. ಬಿರಾದರ ಪೊಲೀಸ್ ಸಿಬ್ಬಂದಿಯೊಂದಿಗೆ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
ಈ ವೇಳೆ ನೂತನ ಅಧ್ಯಕ್ಷ ಉತ್ಕರ್ಷ ಪಾಟೀಲ ಮಾತನಾಡಿ, ಮಾಜಿ ಸಚಿವ ಶ್ರೀಮಂತ ಪಾಟೀಲ, ಯುವ ಮುಖಂಡ ಶ್ರೀನಿವಾಸ ಪಾಟೀಲ ಅವರ ಮಾರ್ಗದರ್ಶನದಲ್ಲಿ, ಎಲ್ಲ ಸದಸ್ಯರನ್ನು ವಿಸ್ವಾಸಕ್ಕೆ ತೆಗೆದುಕೊಂಡು, ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಮಯದಲ್ಲಿ ಪ.ಪಂ. ಸದಸ್ಯರಾದ ರಶೀದಾ ಮೇಸ್ತ್ರಿ, ಸುಲಭಾ ಪಾಟೀಲ, ಅನೀಲ ಮಾಲಗಾಂವೆ, ಮಹಾಧವಲ ಯಾದವಾಡೆ, ರಾಜೇಂದ್ರ ಚೌಗುಲೆ, ರಾಮು ನರಸಾಯಿ, ಬಾಬು ಐನಾಪೂರ, ಶೈಲಾ ಢಾಲೆ, ರೋಹಿಣಿ ಮಾಳಿ, ಶೃತಿ ಮಾಳಗೆ, ರೇಣುಕಾ ಹೊನಕಾಂಬಳೆ, ಅಣ್ಣಪ್ಪಾ ಮಾಕನ್ನವರ, ರಮೇಶ ರತ್ನಾಪ್ಪಗೊಳ, ಮುಖಂಡರಾದ ವಸಂತ ಶಿಂಧೆ, ಚಂದೂ ಜಾಧವ, ಅಶ್ವತ ಪಾಟೀಲ, ರವಿ ಯಂದಗೌಡರ, ವಿನಾಯಕ ಶಿಂಧೆ, ಮದ್ದು ಮುಲ್ಲಾ, ದೀಪಕ ಕಾಂಬಳೆ, ಪ.ಪಂ. ಮುಖ್ಯಾಧಿಕಾರಿ ಸಾಬಣ್ಣಾ ಪೂಜಾರಿ ಸೇರಿದಂತೆ ಪ.ಪಂ.ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.