ಶರಣ ಸಂಸ್ಕೃತಿ ಮಹೋತ್ಸವದಲ್ಲಿ ಡಾ. ಈಶ್ವರ ಮಂಟೂರರಿಗೆ ನುಡಿನಮನ
ಲೋಕದರ್ಶನ ವರದಿ
ಅಥಣಿ 03: ಶರಣ ಈಶ್ವರ ಮಂಟೂರ ಅವರು ಡಾ. ಮಹಾಂತ ಶಿವಯೋಗಿಗಳವರ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಶ್ರೇಷ್ಠ ಪ್ರವಚನಕಾರರಾಗಿ ಗಾಯಕರಾಗಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಅವರು ಮಾತನಾಡಲು ಹಾಡಲೂ ಪ್ರಾರಂಭ ಮಾಡಿದರೆ ಪ್ರಾಣಿಗಳು ಸಹ ತಲೆದೂಗುತ್ತಿದ್ದವು. ಅಂತಹ ಶ್ರೇಷ್ಠ ವ್ಯಕ್ತಿಯು ದೈಹಿಕವಾಗಿ ಅಗಲಿದರೂ ಮಾನಸಿಕವಾಗಿ ಪ್ರತಿಯೊಬ್ಬ ಭಕ್ತರ ಹೃದಯದಲ್ಲಿ ಶಾಶ್ವತ ನೆಲೆಸಿದ್ದಾರೆಂದು ಸವದಿ -ಇಲಕಲ್ ಮಠದ ಶ್ರೀಗುರು ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಸವದಿ ಗ್ರಾಮದ ಲಿಂ. ಶ್ರೀಸಂಗನಬಸವ ಶಿವಯೋಗಿಗಳ 80 ನೇ ಸ್ಮರಣೋತ್ಸವ ಹಾಗೂ ಡಾ. ಮಹಾಂತ ಶಿವಯೋಗಿಳವರ 4 ನೇ ವರ್ಷದ ಸ್ಮರಣೋತ್ಸವ ಅಂಗವಾಗಿ ಸೋಮವಾರ ರಾತ್ರಿ ಜರುಗಿದ ಶರಣ ಸಂಸ್ಕೃತಿ ಮಹೋತ್ಸವದಲ್ಲಿ ಡಾ. ಈಶ್ವರ ಮಂಟೂರ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ತಮ್ಮ ಕೊನೆಯ ಉಸಿರು ಇರುವವರೆಗೂ ಶರಣ ಈಶ್ವರ ಮಂಟೂರ ಅವರು ಅನೇಕ ಸಮಾಜ ಮುಖಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಅನೇಕ ಮಕ್ಕಳಿಗೆ ವಿದ್ಯೆಯ ಜೊತೆಗೆ ಅನ್ನ, ಆಶ್ರಯ ನೀಡಿದ್ದ ಅವರ ಕ್ರೀಯಾಶೀಲ ವ್ಯಕ್ತಿತ್ವ ಅನೇಕರಿಗೆ ಹೊಸ ಚೈತನ್ಯವನ್ನುಂಟು ಮಾಡಿತ್ತು. ಅವರ ಪ್ರವಚನ ಕೇಳಿ ಅನೇಕರು ಅವರ ಅಭಿಮಾನಿಗಳಾಗಿದ್ದರೆಂದು ಅವರು ಹೇಳಿದರು.
ಬಸವ ಕಲ್ಯಾಣದ ಸಂಗಮೇಶ ದೇವರು ಮಾತನಾಡಿ ಜೀವನ ಶಾಶ್ವತವಲ್ಲ ಜೀವನದಲ್ಲಿ ಮಾಡಿರುವ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ. ಶರಣ ಈಶ್ವರ ಮಂಟೂರ ಅವರು ತಮ್ಮ ಬದುಕಿನ ಅವಧಿಯಲ್ಲಿ ಅನೇಕ ಜನರಿಗೆ ಪ್ರಯೋಜನವಾಗುವಂತಹ ಕಾರ್ಯಗಳನ್ನು ಮಾಡಿದ್ದಾರೆ. ಅವರ ಸೇವೆ ಸರ್ವಕಾಲಕ್ಕೂ ಉಳಿಯುವಂತಹದ್ದದೆಂದು ಅವರು ಹೇಳಿದರು.
ಹೇಮಾತಾಯಿ ಈಶ್ವರ ಮಂಟೂರ, ಹಿರಿಯ ಮುಖಂಡ ಸಂಗನಗೌಡ ಪಾಟೀಲ, ನ್ಯಾಯವಾದಿ ಎ.ಎಂ. ಖೊಬ್ರಿ, ರಾವಸಾಬ ಜಕ್ಕಪ್ಪನವರ, ಮಲ್ಲನಗೌಡ ಪಾಟೀಲ, ಸಿದ್ದಪ್ಪ ಸುರಗೋಣ, ಬಸನಗೌಡ ಪಾಟೀಲ, ನಂದಕುಮಾರ ಪಾಟೀಲ, ಸಂಗೌಡ ಪಾಟೀಲ, ಸಂಗಣ್ಣ ಗೂಗವಾಡ, ಡಾ.ಎಸ್.ಎಸ್.ಕೊಪ್ಪದ, ಸುರೇಶ ಸಂತಿ, ಜಯಾನಂದ ಪಾಟೀಲ, ಜಿನ್ನಪ್ಪ ಸುರಗೋಣ, ಮಲ್ಲಪ್ಪ ಅವಟಿ, ಡಿ.ಬಿ.ಠಕ್ಕಣ್ಣವರ, ಪ್ರಕಾಶ ಪಾಟೀಲ, ಮಲ್ಲಪ್ಪ ಅವಟಿ, ಮಲ್ಲಿಕಾರ್ಜುನ ಠಕ್ಕಣ್ಣವರ, ಭೀಮಣ್ಣ ಅಥಣಿ, ಡಾ. ಸುರೇಶ ಮೈಗೂರ, ವೃಷಭ ಓಗಿ, ಪ್ರಕಾಶ ಬಾಳಿಕಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಂಗನ ಬಸವ ಮಠದ ಭಜನಾ ಮಂಡಳಿ ಪ್ರಾರ್ಥಿಸಿದರು. ಪ್ರಕಾಶ ಪಾಟೀಲ ನಿರೂಪಿಸಿ ವಂದಿಸಿದರು.