ಹರಪನಹಳ್ಳಿ

ಜಿಲ್ಲಾ ಉಸ್ತುವಾರಿ ಸಚಿವರ ಸತತ ಪ್ರಯತ್ನದಿಂದ ಜಿಲ್ಲೆಯ ಏಳು ಜನ ಯಾತ್ರಿಕರು ಸುರಕ್ಷಿತವಾಗಿ ದೆಹಲಿಗೆ

ಜಿಲ್ಲಾ ಉಸ್ತುವಾರಿ ಸಚಿವರ ಸತತ ಪ್ರಯತ್ನದಿಂದ ಜಿಲ್ಲೆಯ ಏಳು ಜನ ಯಾತ್ರಿಕರು ಸುರಕ್ಷಿತವಾಗಿ ದೆಹಲಿಗೆ

ಹಾವೇರಿ 13:  ಚಾರ್‌ಧಾಮ್ ಯಾತ್ರೆಗೆ ಹೋಗಿ ಭೂ ಕುಸಿತದಿಂದ ಅರ್ಧದಲ್ಲೇ ಸಿಲುಕಿಕೊಂಡಿದ್ದ ಹಾವೇರಿ ಜಿಲ್ಲೆಯ ಏಳು ಜನ ಯಾತ್ರಿಕರು ಸುರಕ್ಷಿತವಾಗಿದ್ದು, ಎಲ್ಲರೂ ಇದೀಗ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. 

ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ  ಅಲ್ಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನಿರಂತರ ಪ್ರಯತ್ನದಿಂದಾಗಿ ಏಳು ಮಂದಿಯು ಸುರಕ್ಷಿತವಾಗಿ ಭೂ ಕುಸಿತದ ಜಾಗದಿಂದ ಸುರಕ್ಷಿತ ಜಾಗಕ್ಕೆ ಬರುತ್ತಿದ್ದಾರೆ. 

ಹಾನಗಲ್ ತಾಲ್ಲೂಕಿನ ತಿಳವಳ್ಳಿಯ ಅಶೋಕ ವೆಂಕಪ್ಪ ಶಿವಮೊಗ್ಗ (61), ಭಾರತಿ ಅಶೋಕ ಶಿವಮೊಗ್ಗ (55), ಹಿರೇಕೆರೂರು ತಾಲ್ಲೂಕಿನ ಚಿಕ್ಕೇರೂರು ಗ್ರಾಮದ ಶ್ರೀಧರ ಮಂಜಪ್ಪ ಹೊಳಲಕೇರಿ (62), ಶಾಂತಾ ಹೊಳಲಕೇರಿ (57), ವೆಂಕಟೇಶ (62), ರಾಜೇಶ್ವರಿ (60) ಹಾಗೂ ರಾಹುಲ್ (35) ಅವರು ಜೂನ್ 29ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕೇದಾರನಾಥ ಯಾತ್ರೆಗೆ ಹೋಗಿದ್ದರು. 

ಉತ್ತರಾಖಂಡದ ಜೋಶಿಮಠ ಬಳಿ  ಭಾರಿ ಮಳೆಯಿಂದಾಗಿ ಭೂ ಕುಸಿತ ಉಂಟಾಗಿ, ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಏಳು ಮಂದಿಯೂ ಮಾರ್ಗಮಧ್ಯೆಯೇ ಸಿಲುಕಿಕೊಂಡಿದ್ದರು. ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದ ಅವರು, ರಕ್ಷಣೆಗಾಗಿ ಕೋರಿದ್ದರು. 

ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಹಾಗೂ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಯಾತ್ರಿಗಳ ಮನವಿಗೆ ಸ್ಪಂದಿಸಿ, ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದಾದ ನಂತರ, ನಿರಂತರವಾಗಿ ಪ್ರಯತ್ನಿಸಿ ಕೊನೆಗೂ ಏಳು ಮಂದಿಯನ್ನು ಸುರಕ್ಷಿತವಾಗಿ ಸ್ಥಳದಿಂದ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಭೂ ಕುಸಿತ ಸ್ಥಳದಲ್ಲಿದ್ದ ಮಣ್ಣನ್ನು ತೆರವು ಮಾಡಿದ್ದ ಸ್ಥಳೀಯ ಆಡಳಿತ ಮಂಡಳಿ ಸಿಬ್ಬಂದಿ, ಹಾವೇರಿಯ ಏಳು ಮಂದಿಯನ್ನು ವಿಶೇಷ ಕಾಳಜಿ ಮೂಲಕ ಮುಂದಕ್ಕೆ ಕಳುಹಿಸಿಕೊಟ್ಟಿದ್ದಾರೆ.   ಅವರು ಇಂದು ದೆಹಲಿಗೆ ಆಗಮಿಸಲಿದ್ದು,  ಜುಲೈ 16ರಂದು ಏಳು ಮಂದಿಯೂ ದೆಹಲಿಯಿಂದ ವಿಮಾನದಲ್ಲಿ ಹುಬ್ಬಳ್ಳಿಗೆ ಬಂದು, ಅಲ್ಲಿಂದ ಹಾವೇರಿಗೆ ಬರಲಿದ್ದಾರೆ. 

ಯಾತ್ರಿಗಳನ್ನು ಸುರಕ್ಷಿತವಾಗಿ ಹಾವೇರಿಗೆ ಕರೆತರಲು ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಆಡಳಿತ ಮಂಡಳಿ ಅಧಿಕಾರಿಗಳ ಜೊತೆಯಲ್ಲೂ ಸಂಪರ್ಕದಲ್ಲಿದ್ದೇವೆ. ಎಲ್ಲರೂ ಸುರಕ್ಷಿತವಾಗಿ ಹಾವೇರಿಗೆ ಬರಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಹಾಗೂ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ. 


ಸುದ್ದಿ ಓದಿ