ರೈತರ ಬದುಕು ಹಸನಾಗಿಸಲು ನರೇಗಾದಲ್ಲಿ ಸಾಕಷ್ಟು ಸೌಲಭ್ಯ

 ಸಹಾಯಕ ನಿರ್ದೇಶಕ ಡಿ.ಎನ್‌.ಹೇಮಾದ್ರಿನಾಯ್ಕ ಅಭಿಮತ: ದ್ಯಾಪನಾಯಕನಹಳ್ಳಿಯಲ್ಲಿ ರೈತರ ದಿನಾಚರಣೆ ಸಂವಾದ ಕಾರ್ಯಕ್ರಮ 

ಹರಪನಹಳ್ಳಿ 23: ರೈತರ ಬದುಕನ್ನು ಹಸನಾಗಿಸಲು ನರೇಗಾದಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಕೆರೆ, ಕುಂಟೆಗಳ ಅಭಿವೃದ್ಧಿ ಮೂಲಕ ಜಲ ಸಂರಕ್ಷಣೆ ಕೈಗೊಳ್ಳುವುದರ ಜತೆಗೆ ನೀರಿನ ಮಹತ್ವ ಅರಿಯಬೇಕಿದೆ ಎಂದು ಡಿ.ಎನ್‌.ಹೇಮಾದ್ರಿ ನಾಯ್ಕ ಹೇಳಿದರು. 

ತಾಲೂಕಿನ ನಿಚ್ಚವ್ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ್ಯಾಪನಾಯಕನಹಳ್ಳಿಯ ಅಮೃತ ಸರೋವರದ ಕಟ್ಟೆ ಮೇಲೆ ಶುಕ್ರವಾರ ಗ್ರಾಪಂನಿಂದ ಆಯೋಜಿಸಿದ್ದ ರಾಷ್ಟ್ರೀಯ ರೈತರ ದಿನಾಚರಣೆ(ಕಿಸಾನ್ ದಿವಸ್) ನಿಮಿತ್ತ ಜಲ ಸಂಜೀವಿನಿ-ರೈತರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.  

ಮಹಾತ್ಮಗಾಂಧಿ ನರೇಗಾ ಯೋಜನೆಯ ಡಿಜಿಯೋ-ಸ್ಪೇಷಿಯಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳ ಅನುಷ್ಠಾನಿಸುವ ಕಾರ್ಯಕ್ರಮವೇ ಜಲ ಸಂಜೀವಿನಿ. ಈ ಯೋಜನೆಯಡಿ ದೂರ ಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ವವಸ್ಥೆಯ ತಾಂತ್ರಿಕತೆಯನ್ನು ಆಧರಿಸಿ ವೈಜ್ಞಾನಿಕವಾಗಿ ಕ್ರಿಯಾಯೋಜನೆ ರೂಪಿಸಲಾಗುತ್ತದೆ. ಆದ್ದರಿಂದ ಈ ಭಾಗದ ರೈತರು ಎಲ್ಲೆಲ್ಲಿ ನೀರಿನ ಸಂರಕ್ಷಣೆ ಆಗಬೇಕಿದೆ. ಎಷ್ಟೆಷ್ಟು ನೀರಿನ ಬೇಡಿಕೆ ಇದೆ ಎಂಬುದನ್ನು ಸರ್ವೇ ಸಂದರ್ಭದಲ್ಲಿ ಅಗತ್ಯ ಮಾಹಿತಿ ನೀಡಬೇಕಿದೆ ಎಂದು ತಿಳಿಸಿದರು. 

ಸಂವಾದದಲ್ಲಿ ಮಾತನಾಡಿದ ರೈತರು, ಮಳೆಗಾಲದಲ್ಲಿ ತಮ್ಮ ಜಮೀನುಗಳಿಗೆ ಹೆಚ್ಚಿನ ನೀರು ಹರಿದು ಬಂದು ಬೆಳೆಗಳು ನಾಶವಾಗುತ್ತಿವೆ. ಇದರಿಂದ ರೈತರು ಸಾಕಷ್ಟು ನಷ್ಟಗೊಂಡು ಆರ್ಥಿಕ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಈ ಬಗ್ಗೆ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಂಡು ರೈತರ ನೆರವಿಗೆ ಬರಬೇಕುಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎ.ಡಿ. ಹೇಮಾದ್ರಿ ನಾಯ್ಕ ಅವರು, ಎಲ್ಲೆಲ್ಲಿ ನದಿ, ಕೆರೆಗಳು ಒತ್ತುವರಿ ಆಗಿದ್ದರೆ ಈ ರೀತಿಯ ಸಮಸ್ಯೆಗಳು ಕಂಡು ಬರುತ್ತವೆ. ಒಂದು ವೇಳೆ ಒತ್ತುವರಿ ಆಗದೆ ಇದ್ದೂ ಇಂತಹ ಸಮಸ್ಯೆಗಳು ಸೃಷ್ಟಿಯಾಗಿದ್ದರೆ ಅದಕ್ಕೆ ವೈಜ್ಞಾನಿಕವಾಗಿ ಯೋಜನೆ ತಯಾರಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು. 

ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ಐಇಸಿ ಸಂಯೋಜಕ ವಸಿಗೇರ​‍್ಪ ಕೆ. ಚಾಗನೂರು ಮಾತನಾಡಿದರು. ಗ್ರಾಪಂ ಪಿಡಿಒ ಮುಕ್ತಾರ್ ಅಲಿ, ಅಧ್ಯಕ್ಷ ಪಿ.ದೇವೇಂದ್ರ​‍್ಪ, ಸದಸ್ಯರಾದ ರಾಜಪ್ಪ, ಮುಖಂಡರಾದ ನಾಗರಾಜ, ಹನುಮಂತಪ್ಪ, ಮೂರ್ತಿನಾಯ್ಕ, ನರೇಗಾ ಹಾಗೂ ಗ್ರಾಪಂ ಸಿಬ್ಬಂದಿ, ರೈತರು, ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.