ಧಾರವಾಡ - ಹುಬ್ಬಳ್ಳಿ

ಸ್ವಸಹಾಯವೇ ಸಹಕಾರ ತತ್ವದ ಬುನಾದಿ: ಡಾ. ರಂಗನಾಥ

ಸ್ವಸಹಾಯವೇ ಸಹಕಾರ ತತ್ವದ ಬುನಾದಿ: ಡಾ. ರಂಗನಾಥ

ಧಾರವಾಡ 21: ಸ್ವಸಹಾಯವೇ ಸಹಕಾರ ತತ್ವದ ಬುನಾದಿ. ಸಹಕಾರ ಕ್ಷೇತ್ರದಲ್ಲಿ ಲಾಭಕ್ಕಿಂತ ಸೇವೆಯೇ ಮುಖ್ಯ ಎಂದು ಬೆಂಗಳೂರಿನ ಸಮಾಜ ಚಿಂತಕ ಡಾ. ಎಂ. ಆರ್‌. ರಂಗನಾಥ ಹೇಳಿದರು.  

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ವಿರೂಪಾಕ್ಷ ಶಿವಯೋಗೆಪ್ಪ ಬಸವನಾಳ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ನೀರಾವರಿ ಹಾಗೂ ಸಹಕಾರ’ ವಿಷಯ ಕುರಿತು ಮಾತನಾಡುತ್ತಿದ್ದರು.   

ಸಮಾನತೆ ಮತ್ತು ಉಳಿತಾಯ ತತ್ವದಡಿ ಉದಯವಾದ ಸಹಕಾರ ಸಂಘಗಳು ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಯ ಸ್ವಯಂ ಪ್ರೇರಿತ ವಿಧಾನವಾಗಿದೆ. ಅವಿಭಜಿತ ಧಾರವಾಡ ಜಿಲ್ಲೆಯ ಗದಗ ತಾಲೂಕಿನ ಕಣಗಿನಹಾಳದಲ್ಲಿ ಭಾರತದಲ್ಲಿಯೇ ​‍್ರ​‍್ರಥಮ ಸಹಕಾರ ಸಂಘವು ಸಿದ್ಧನಗೌಡ ಪಾಟೀಲ ಅವರು 1905ರಲ್ಲಿ ಗ್ರಾಮೀಣ ರೈತರಿಗಾಗಿ ಪ್ರಾರಂಭಿಸಿದರು. ಭಾರತದಲ್ಲಿ ಸಹಕಾರ ಸಂಘ ಸ್ಥಾಪನೆಗೆ ಮೊದಲ ಹೆಜ್ಜೆ ಇಟ್ಟ ರಾಜ್ಯವೇ ನಮ್ಮ ಕರ್ನಾಟಕ ಎಂಬುದು ಹೆಮ್ಮೆಯ ಸಂಗತಿ. ಇಂದು ವಿವಿಧ ಉದ್ದೇಶಗಳನ್ನಿಟ್ಟುಕೊಂಡು 35 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಸಾಲ ಮರುಪಾವತಿಯು ಅತ್ಯಂತ ಸಮಾಧಾನಕರವಾಗಿದೆ.  

ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಇಂದು ನೀರಾವರಿ ಕ್ಷೇತ್ರ ವಿಸ್ತೃತವಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ನೀರನ್ನು ಅವೈಜ್ಞಾನಿಕವಾಗಿ ಉಪಯೋಗಿಸುತ್ತಿರುವುದರಿಂದ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡು ಸವಳು ಮತ್ತು ಜವುಳು ಆಗಿ ಪರಿವರ್ತನೆಯಾಗುತ್ತಿದೆ. ಈ ದೆಸೆಯಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು ನೀರಿನ ಸದ್ಬಳಕೆಯನ್ನು ಮಾಡಿಕೊಳ್ಳಲು ನೀರು ಬಳಕೆದಾರರ ಸಹಕಾರ ಸಂಘವನ್ನು ಸ್ಥಾಪನೆ ಮಾಡಲಾಗಿದೆ. ಈಗಾಗಲೇ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಮೂಲಕ ನೀರು ದುಂದುವೆಚ್ಚವಾಗದಂತೆ ಯೋಜಿಸಲಾಗಿದೆ. ನೀರಿನ ಸದ್ಬಳಕೆಯಾಗದಿದ್ದಲ್ಲಿ ಭವಿಷ್ಯದಲ್ಲಿ ನೀರಿಗಾಗಿ ಜನರು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.  

ಅಧ್ಯಕ್ಷತೆ ವಹಿಸಿದ್ದ ಕೆ.ಎಲ್‌.ಇ. ಸಂಸ್ಥೆಯ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ ಮಾತನಾಡಿ, ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಬಹಳ ಮುಖ್ಯ. ಜನರ ವಿಶ್ವಾಸ ಪಡೆದಾಗ ಮಾತ್ರ ಸಂಘ-ಸಂಸ್ಥೆಗಳು ಬೆಳವಣಿಗೆಯಾಗಲು ಸಾಧ್ಯ. ಗುರುಸಿದ್ದೇಶ್ವರ ಸಹಕಾರಿ ಬ್ಯಾಂಕ್ ಹಾಗೂ ಸಹಕಾರಿ ಆಸ್ಪತ್ರೆಗಳು ಸಂಧಿಗ್ದ ಸ್ಥಿತಿಯಲ್ಲಿದ್ದಾಗ ತಾವು ಪ್ರಾಮಾಣಿಕವಾಗಿ ಅವುಗಳ ಬೆಳವಣಿಗೆಗೆ ಶ್ರಮಿಸಿದ್ದನ್ನು ಸ್ಮರಿಸಿಕೊಂಡರು.  

ದತ್ತಿದಾನಿ ಕೆ.ಸಿ.ಸಿ. ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಎಸ್‌.ಜಿ. ಪಾಟೀಲ ಬ್ಯಾಂಕಿನೊಂದಿಗಿನ ತಮ್ಮ ಸುದೀರ್ಘ ಸೇವೆಯ ಅನುಭವವನ್ನು ಹಂಚಿಕೊಂಡರು. ವೇದಿಕೆಯ ಮೇಲೆ ರವೀಂದ್ರ ಶಿ. ಬಸವನಾಳ ಇದ್ದರು.  

ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು.  

ಡಾ. ಜಿನದತ್ತ ಹಡಗಲಿ, ಪ್ರೊ. ಸವದಿ, ಡಾ. ಮೃತ್ಯುಂಜಯ ಶೆಟ್ಟರ, ಸಿ.ಎಸ್‌. ಪಾಟೀಲ, ಆರ್‌.ಎಂ. ಪಾಟೀಲ, ಎಂ.ಎಂ. ಪಾಟೀಲ, ಬಿ.ಎಲ್‌. ಶಿವಳ್ಳಿ, ಶಂಕರಲಿಂಗ ಶಿವಳ್ಳಿ, ಶಾರದಾ ಕೌದಿ, ಪ್ರದೀಪ ಸೇರಿದಂತೆ ಬಸವನಾಳ ಹಾಗೂ ಪಾಟೀಲ ಪರಿವಾರದವರು ಇದ್ದರು. 


ಸುದ್ದಿ ಓದಿ