ಖಿಳೇಗಾಂವದಲ್ಲಿ ಸರಣಿ ಕಳ್ಳತನ: ಅಂಚೆ ಕಛೇರಿಯನ್ನು ಬಿಡದ ಕಳ್ಳರು
ಲಕ್ಷಾಂತರ ರೂ.ಗಳ ಚಿನ್ನಾಭರಣ, ಮೋಟಾರ್ ಬೈಕ್, ಆಡಿನ ಮರಿ, ಟಿವ್ಹಿ ಮತ್ತು ನಗದು ಹಣ ದೋಚಿಕೊಂಡು ಪರಾರಿ
ವೆಂಕಟೇಶ ದೇಶಪಾಂಡೆ
ಅಥಣಿ 23: ತಾಲೂಕಿನ ಖಿಳೇಗಾಂವ ಗ್ರಾಮದಲ್ಲಿ ಒಂದೇ ದಿನ 6 ಮನೆಗಳ ಹಾಗೂ ಅಂಚೆ ಕಛೇರಿಯ ಬೀಗ ಮುರಿದು ಲಕ್ಷಾಂತರ ರೂ.ಗಳ ಚಿನ್ನಾಭರಣ, ಮೋಟಾರ್ ಬೈಕ್, ಆಡಿನ ಮರಿ, ಟಿವ್ಹಿ ಮತ್ತು ನಗದು ಹಣ ದೋಚಿಕೊಂಡು ಹೋದ ಘಟನೆ ಶನಿವಾರ ನಡೆದಿದೆ.
ಖಿಳೇಗಾಂವ ಗ್ರಾಮದ ಸುಶೀಲಾಬಾಯಿ ಹೊನ್ನಾಗೋಳ ಮನೆಯಲ್ಲಿ 25 ಸಾವಿರ ನಗದು ಹಾಗೂ 1 ತೊಲೆ ಬಂಗಾರದ ಆಭರಣ, ಶೀತಲ್ ಸುರೇಶ ಚಂಡಿ ಮನೆಯಲ್ಲಿ 3 ತೊಲೆ ಬಂಗಾರ ಹಾಗೂ ಸ್ಮಾರ್ಟ ಟಿವಿ ಯನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಲ್ಲದೆ ಸಾಗರ ಸದಾಶಿವ ದಿವಾನಗೋಳ ಮನೆಯ ಹೊರಗಿದ್ದ ಮೋಟಾರ್ ಬೈಕ್ ಹಾಗೂ ಒಂದು ಆಡಿನ ಮರಿಯನ್ನು ಹೊತ್ತುಕೊಂಡು ಹೋಗಿದ್ದಾರೆ ಅಲ್ಲದೆ ಗ್ರಾಮದಲ್ಲಿರುವ ಅಪ್ಪಾಸಾಹೇಬ ಮಲ್ಲಾಸಾಹೇಬ ಬಸರಗಿ ಮನೆಯ ಬೀಗ ಮುರಿದು ಎಲ್ಲ ಕಡೆ ಹುಡುಕಿದ ಕಳ್ಳರು ಅಲ್ಲಿ ಎನೂ ಸಿಗದೇ ಇದ್ದಾಗ ಮನೆಯ ಇನ್ನೊಂದು ಭಾಗದಲ್ಲಿದ್ದ ಅಂಚೆ ಕಛೇರಿಯ ಬೀಗವನ್ನೂ ಕೂಡ ಮುರಿದು ದಾಖಲೆಗಳನ್ನು ತಡಕಾಡಿ ಏನೂ ಸಿಗದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಸುದ್ದಿ ತಿಳಿದ ತಕ್ಷಣ ಅಥಣಿ ಪೊಲೀಸ್ ಠಾಣೆಯ ಪಿಎಸ್ಐ ಕುಮಾರ ಹಾಡಕರ ಖಿಳೇಗಾಂವ ಗ್ರಾಮಕ್ಕೆ ಭೇಟಿ ನೀಡಿ ಕಳ್ಳತನವಾದ ಎಲ್ಲ ಮನೆಗಳಿಗೆ ಭೇಟಿ ನೀಡಿ ಪರೀಶೀಲಿಸಿದರು. ನಂತರ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು ಮನೆಗೆ ಬೀಗ ಹಾಕಿ ಬೇರೆ ಊರಿಗೆ ಹೋಗುವ ಮುನ್ನ ಪಂಚಾಯತ ಸಿಬ್ಬಂದಿ ಮೂಲಕ ಗ್ರಾಮದ ಬೀಟ್ ಪೊಲೀಸ್ರಿಗೆ ಮಾಹಿತಿ ನೀಡಿ ಅಥವಾ ಪಕ್ಕದ ಮನೆಯವರಿಗೆ ಮಾಹಿತಿ ನೀಡಿ ಹೋಗಿ ಜೊತೆಗೆ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಹಣವನ್ನು ನಿಮಗೆ ವಿಶ್ವಾಸ ಎನಿಸಿದ ಸಂಬಂಧಿಕರ ಅಥವಾ ಹಿತೈಶಿಗಳ ಮನೆಯಲ್ಲಿಟ್ಟು ಹೋಗಿ ಎಂದು ಮನವಿ ಮಾಡಿದರು.
ಗ್ರಾಮಸ್ಥರ ಹಿತ ದೃಷ್ಟಿಯಿಂದ ಗ್ರಾಮ ಪಂಚಾಯತನವರು ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಇದರಿಂದ ಯಾರೇ ಅಪರಿಚಿತರು ಗ್ರಾಮವನ್ನು ಪ್ರವೇಶಿಸಿದರೂ ಕೂಡ ತಕ್ಷಣ ಮಾಹಿತಿ ಸಿಗುತ್ತದೆ ಅಲ್ಲದೆ ರಾತ್ರಿ ಸಮಯದಲ್ಲಿ ಅಪರಿಚಿತರು ಸಂಶಯಾಸ್ಪದವಾಗಿ ತಿರಗುತ್ತಿರುವುದು ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ಅದಕ್ಕೂ ಮೊದಲು ಗ್ರಾಮದ ಹಿರಿಯರಿಗೆ ಮಾಹಿತಿ ಒದಗಿಸಿ ಮತ್ತು ಇಂತಹ ಪ್ರಕರಣಗಳನ್ನು ತಡೆಯಲು ಯುವಕರು ಗುಂಪು ಗುಂಪಾಗಿ ಗ್ರಾಮದಲ್ಲಿ ಕೆಲ ದಿನಗಳವರೆಗೆ ರಾತ್ರಿ ಗಸ್ತು ತಿರುಗಿ ಎಂದ ಅವರು ಈ ಹಿಂದಿನಂತೆ ಗ್ರಾಮದಲ್ಲಿ ಒಬ್ಬ ಕಾವಲುಗಾರನನ್ನು ನೇಮಕ ಮಾಡಿಕೊಳ್ಳಿ ಆಗ ಕಳ್ಳತನ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯ ಎಂದರು.
ಖಿಳೇಗಾಂವ ಗ್ರಾಮ ಪಂಚಾಯತ ಅಧ್ಯಕ್ಷ ರವಿ ನಾಗಗೋಳ ಮಾತನಾಡಿ, ಕೆಲವೇ ದಿನಗಳಲ್ಲಿ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುತ್ತೇವೆ ಅಲ್ಲದೆ ಗ್ರಾಮಸ್ಥರು ಕೂಡ ಮನೆಯಿಂದ ಹೊರ ಹೋಗುವಾಗ ಮನೆಯಲ್ಲಿ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಇಡಬೇಡಿ ಹಾಗೇನಿದ್ದರೂ ಕೂಡ ಹಣ ಮತ್ತು ಚಿನ್ನಾಭರಣಗಳನ್ನು ಸಂಬಂಧಿಕರ ಮನೆಯಲ್ಲಿ ಇಟ್ಟು ಹೋಗಿ ಎಂದು ಮನವಿ ಮಾಡಿದರು.
ಖಿಳೇಗಾಂವ ಗ್ರಾಮದಿಂದ ಮಹಾರಾಷ್ಟ್ರ ರಾಜ್ಯ ಎರಡು ಕಿ.ಮಿ ಅಂತರದಲ್ಲಿರುವದರಿಂದ ಮಹಾರಾಷ್ಟ್ರದಿಂದಲೇ ಕಳ್ಳರು ಬಂದಿರಬಹುದೆಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಸುನೀಲ ಚೌಗಲಾ, ಗ್ರಾಪಂ ಸದಸ್ಯರಾದ ಧರೆಪ್ಪ ಹೊನ್ನಾಗೋಳ, ವಿಜಯ ಅಳ್ಳಿಟ್ಟಿ, ಗ್ರಾಪಂ ಸಿಬ್ಬಂದಿ ಸಾಗರ ದಿವಾನಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.