ಗುಳೇಗುಡ್ಡ

ಗುಳೇದಗುಡ್ಡದಲ್ಲಿ ಸರಣಿ ಕಳ್ಳತನ : ಭಯದಲ್ಲಿ ಜನ

ಗುಳೇದಗುಡ್ಡದಲ್ಲಿ ಸರಣಿ ಕಳ್ಳತನ : ಭಯದಲ್ಲಿ ಜನ
ಶಿಕ್ಷಕರ ನಗರದಲ್ಲಿ ಮನೆಯಲ್ಲಿನ ಟ್ರೇಜರಿ ತೆರೆದು ಕಳ್ಳತನ ಮಾಡಿದ ದೃಶ್ಯ

ಗುಳೇದಗುಡ್ಡ 05: ಗುಳೇದಗುಡ್ಡದ ಹೊರವಲಯದ ಶಿಕ್ಷಕ ನಗರ ಹಾಗೂ ಬರಗುಂಡಿ ಬಡಾವಣೆಯಲ್ಲಿ ನಾಲ್ಕಾರು ಕಡೆಗಳಲ್ಲಿ ಮನೆಗಳಿಗೆ ನುಗ್ಗಿ, ಚಾಕು ತೋರಿಸಿ, ಮನೆಯೊಂದರ ಮಹಿಳೆಗೆ ಒದ್ದು ಮನೆಯಲ್ಲಿನ ಬಂಗಾರ ಹಾಗೂ ನಗದು ಹಣ ದೊಚಿದ ಘಟನೆ ನಡೆದಿದೆ.  

ಬುಧವಾರ ಮಧ್ಯರಾತ್ರಿ 2 ರಿಂದ 3 ಗಂಟೆಯೊಳಗೆ ಈ ಘಟನೆಗಳು ನಡೆದಿದ್ದೂ ಹೊರವಲಯದ ಬಡಾವಣೆಗಳಲ್ಲಿ ನಿವಾಸಿಗಳು ಭಯದ ವಾತಾವರಣ ಸೃಷ್ಟಿಯಾಗಿದೆ.  

ಎಸ್‌.ಎಸ್‌. ಉಮಚಗಿ ಎಂಬುವವರ ಮನೆಗೆ ನುಗ್ಗಿದ ಮುಸುಕುಧಾರಿ ಕಳ್ಳರು ಮನೆಯ ಹಿಂದಿನ ಬಾಗಿಲಿಂದ ಒಳ ಬಂದಿದ್ದಾರೆ. ಕೋಣೆಯಲ್ಲಿದ್ದ ಟ್ರೈಜರಿಯಲ್ಲಿನ ಪ್ಲಾಸ್ಟಿಕ್ ಕವರ್‌ದಲ್ಲಿ ಭದ್ರವಾಗಿಟ್ಟಿದ್ದ ರೂ. 25 ಸಾವಿರ ನಗದು, 90 ಗ್ರಾಂ. ಚಿನ್ನದ ಆಭರಣಗಳಲ್ಲಿ 45 ಗ್ರಾಂ.ದಷ್ಟು ಗಟ್ಟಿ ಬಂಗಾರದ ವಡವೆಗಳನ್ನು  ಒಯ್ದು, ಉಳಿದ 45 ಗ್ರಾಂ.ದಷ್ಟು ಆಭರಣಗಳನ್ನು ರೋಲ್‌ಗೋಲ್ಡ್‌ ಚಿನ್ನವೆಂದು ತಿಳಿದು ಬಿಟ್ಟು ಹೋಗಿದ್ದಾರೆ. ಮನೆಯಲ್ಲಿ ಮಕ್ಕಳು ಬಂಗಾರದ ಜೊತೆಗೆ ರೋಲ್‌ಗೋಲ್ಡ್‌ ವಡವೆಗಳನ್ನು ಇಟ್ಟಿದ್ದರಿಂದ ಅದರೊಂದಿಗೆ ಇದ್ದ ಅರ್ಧದಷ್ಟು ಚಿನ್ನದ ಅಭರಣಗಳು ಬಚಾವ್ ಆಗಿದೆ. ಕೋಣೆಯ ಬಟ್ಟೆಗಳನ್ನು ಚಿಲ್ಲಾಪಿಲ್ಲಿ ಮಾಡಿದ್ದಾರೆ. ಅಷ್ಟರಲ್ಲಿ ಎಚ್ಚರಿಕೆಯಾದ ತಾಯಿ ಮಗಳಿಗೆ ಚಾಕು ತೋರಿಸಿ ಹೆದರಿಸಿದ್ದಾರೆ. ಅಷ್ಟೇ ಅಲ್ಲದೆ ಗೃಹಿಣಿಗೆ ಒದೆದು ಪರಾರಿಯಾಗಿದ್ದಾರೆ.  

ಪಕ್ಕದ ಕೋಣೆಯಲ್ಲಿ ಮಲಗಿದ್ದ ಕುಟುಂಬದ ಉಮಚಗಿ ಅವರ ಕೋಣೆ ಬಾಗಿಲನ್ನು ಮೊದಲೇ ಹೊರಗಿನಿಂದ ಹಾಕಿದ್ದರಿಂದ ಅವರಿಗೆ ಮನೆಯಲ್ಲಿ ನಡೆದ ಘಟನೆ ಗೊತ್ತಾಗಿಲ್ಲ. ನಂತರ ಮಹಿಳೆಯರ ಅಳುವ ಕೂಗುವ ದ್ವನಿ ಕೇಳಿ ಪಕ್ಕದ ಮನೆಗಳಿಂದ ಜನ ಓಡಿ ಬಂದು ಬಾಗಿಲು ತೆರೆದಾಗ ನಡೆದ ಘಟನೆ ಗೊತ್ತಾಗಿದೆ. 

ಅದೇ ವೇಳೆಗೆ ಅಂದಾಜು 200 ಮೀ. ದೂರದ ಎನ್‌.ಎಂ. ಕಿತ್ತೂರ ಎನ್ನುವವರ ಮನೆಯ ಮುಂದಿನ ಬಾಗಿಲ ಒಳಗಿನ ಲಾಕ್ ಮುರಿದು ಒಳಬಂದು ಪ್ಯಾಂಟಿನ ಜೇಬಿನಲ್ಲಿದ್ದ ರೂ.3 ಸಾವಿರ ರೂ. ತೆಗೆದುಕೊಂಡಿದ್ದಾರೆ. ನಿದ್ದೆಯಿಂದ ಎಚ್ಚರಾಗಿ ಎದ್ದು ಕೈಹಿಡಿಯಲು ಹೋದ ಮನೆಯ ಮಹಿಳೆಯಿಂದ ಬಿಡಿಸಿಕೊಂಡು ಕಳ್ಳ ಪರಾರಿಯಾಗಿದ್ದಾನೆ. 

 ಬೆರಳಚ್ಚು ತಜ್ಞರು, ಸ್ವಾನದಳ ಭೇಟಿ :  ಬೆರಳಚ್ಚು ತಜ್ಞರು, ಸ್ವಾನ ಹಾಗೂ ಅದರ  ತಂಡದವರು ಘಟನಾ ಸ್ಥಳಕ್ಕೆ ಆಗಮಿಸಿ, ತನಿಖೆ ಕೈಗೊಂಡರು. ಸ್ಥಳೀಯ ಪಿಎಸೈ ಪುಂಡಲೀಕ ಪಟಾತರ್ ಹಾಗೂ ಅವರ ತಂಡ ಘಟನಾ ಸ್ಥಳಕ್ಕೆ ಬಂದು ಮಾಹಿತಿ ಕಲೆಹಾಕಿ ತನಿಖೆ ಕೈಗೊಂಡಿದ್ದಾರೆ.  

ಬಡಾವಣೆಗಳಿಗೆ ರಸ್ತೆ ದೀಪಗಳಿಲ್ಲ : ಬಾಗಲಕೋಟೆ ರಸ್ತೆಗೆ ಇರುವ ಹೊರವಲಯದ ಬಡಾವಣೆಗಳನ್ನು  ಅಭಿವೃದ್ಧಿ ಪಡಿಸದೇ ನಿವೇಶನಗಳನ್ನು ವಿತರಿಸಲಾಗಿದೆ.  ಲೇಓಟ್ ಮಾಡಿದ ಮಾಲಿಕರು ರಸ್ತೆಗಳಿಗೆ ವಿದ್ಯುತ್ ಕಂಬಗಳನ್ನೂ ಸಹ ಹಾಕಿಲ್ಲ. ಕುಡಿಯಲು ನೀರಿಲ್ಲ, ರಸ್ತೆಗಳಿಲ್ಲ. ಆದರೂ ಪುರಸಭೆ ಅವರಿಂದ ಅಭಿವೃದ್ಧಿ ಕರ ವಸೂಲಿ ಮಾಡಿದೆ ಎನ್ನುತ್ತಾರೆ ಬಡಾವಣೆ ನಿವಾಸಿಗಳು.  

ಮೂಲಭೂತ ಸೌಕರ್ಯಗಳಿಲ್ಲ: ಕಳೆದ 6 ತಿಂಗಳುಗಳ ಹಿಂದೆ ಶಿಕ್ಷಕರ ನಗರದ ಗೋಳಿನ ಸ್ಟೋರಿ ಸುವರ್ಣ ಚಾನಲ್ ಬಿಗ್ 3 ದಲ್ಲಿ ಪ್ರಸಾರ ಮಾಡಿತ್ತು. ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯನವರೊಂದಿಗೆ ಲೈವ್‌ದಲ್ಲಿ ಮಾತನಾಡಿದ ತಕ್ಷಣ ಬಡಾವಣೆಗೆ ಪುರಸಭೆ ಮುಖ್ಯಾಧಿಕಾರಿ, ಅಧ್ಯಕ್ಷರು, ವಾರ್ಡ್‌ ಸದಸ್ಯರು ಸ್ಥಳಕ್ಕೆ ಬಂದು, ಅರ್ಧಗಂಟೆಯಲ್ಲಿ ಗುತ್ತಿಗೆದಾರರನ್ನು ಕರೆಯಿಸಿ ರಸ್ತೆಯ 6 ಕಂಬಗಳಿಗೂ ದೀಪ ಅಳವಡಿಸಿಸಿ, ರಸ್ತೆ, ನೀರು ಸೇರಿದಂತೆ ಉಳಿದ ಅಭಿವೃದ್ಧಿಯನ್ನು ತಿಂಗಳೊಳಗೆ ಮಾಡುವುದಾಗಿ ಭರವಸೆ ನೀಡಿದ್ದರು. 

ರಸ್ತೆ ಕಂಬದ ದೀಪ ಕಿತ್ತು ಒಯ್ದ ಗುತ್ತಿಗೆದಾರ ! ಭರವಸೆ ಹುಸಿಯಾಯ್ತು. ನಾಲ್ಕು ತಿಂಗಳಾದರೂ ಗುತ್ತಿಗೆ ದಾರನಿಗೆ ದೀಪ ಅಳವಡಿಸಿದ ಬಿಲ್ ಕೊಡಲಿಲ್ಲವೆಂಬ ಕಾರಣಕ್ಕೆ ಆತ ರಸ್ತೆಗೆ ಅಳವಡಿಸಿದ್ದ ದೀಪಗಳನ್ನು ಕಿತ್ತು ಒಯ್ದುಬಿಟ್ಟ. ಇದರ ಪರಿಣಾವಾಗಿ ಕಳೆದ ನಾಲ್ಕಾರು ತಿಳಗಳಿಂದ ಹೊರವಲಯದ ಬಡಾವಣೆ ಕತ್ತಲಲ್ಲಿ ಇದೆ ಎಂದು ನಿವಾಸಿಗಳು ಹಿಡಿಶಾಪ ಹಾಕುತ್ತಾರೆ. 

ಸುದ್ದಿ ಓದಿ