ಕಾಗವಾಡ

ಸ್ವಚ್ಛ ವಿದ್ಯಾಲಯ ಪ್ರಶಸ್ತಿಗೆ ಆಯ್ಕೆ

ಸ್ವಚ್ಛ ವಿದ್ಯಾಲಯ ಪ್ರಶಸ್ತಿಗೆ ಆಯ್ಕೆ

ಶೇಡಬಾಳ 18: ಸಮೀಪದ ಕಾಗವಾಡದ ಆಚಾರ್ಯ ವಿದ್ಯಾಸಾಗರ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ 2021-22 ನೇ ಸಾಲಿನ ಸ್ವಚ್ಛ ವಿದ್ಯಾಲಯ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕಾಗವಾಡ ತಾಲೂಕಾ ವಿಭಾಗ ಮಟ್ಟದಲ್ಲಿ ಪ್ರಶಸ್ತಿಗೆ ಶಾಲೆಯು ಆಯ್ಕೆಯಾಗಿರುವುದು ಶ್ಲಾಘನೀಯವಾಗಿದೆ. 

ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಶಿಕ್ಷಣ ಇಲಾಖೆಯಲ್ಲಿ ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛ ವಿದ್ಯಾಲಯ ಪ್ರಶಸ್ತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಚಿಕ್ಕೋಡಿ ಜಿಲ್ಲೆಯ 2058 ಶಾಲೆಗಳು ಈ ಕಾರ್ಯಕ್ರಮದಡಿ ಭಾಗವಹಿಸಿದ್ದವು. ಈ ಪೈಕಿ 38 ಶಾಲೆಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಕಾಗವಾಡ ಪಟ್ಟಣದ ಆಚಾರ್ಯ ಶ್ರೀ 108 ವಿದ್ಯಾಸಾಗರ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆಯೂ ಒಂದಾಗಿದೆ. 

ಈ ಶಿಕ್ಷಣ ಸಂಸ್ಥೆಯು ಅನುದಾನ ರಹಿತವಾಗಿದ್ದು, ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಸ್ವಚ್ಛತೆಯನ್ನೂ ಕಲಿಸಿಕೊಡುತ್ತಾರೆ. ಶಾಲಾ ಆವರಣದಲ್ಲಿ ಸದಾ ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ಇಡಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಜಿಲ್ಲಾ ಶಿಕ್ಷಣ ಇಲಾಖೆ ಈ ಶಾಲೆಯನ್ನು ಸ್ವಚ್ಛ ವಿದ್ಯಾಲಯ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಶಾಲೆಗೆ ಶೇ. 82 ಅಂಕ ಬಂದಿವೆ. ಚಿಕ್ಕೋಡಿ ಯಲ್ಲಿರುವ ಜಿಲ್ಲಾ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಹಂಚಾಟೆ ಶಾಲೆಯ ಮುಖ್ಯಾಧ್ಯಾಪಕ ಎಸ್‌.ಎಸ್ ಜಮಖಂಡಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪ್ರಶಸ್ತಿ ಪಡೆದುಕೊಳ್ಳುವಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿಯವರು ಸಹಕಾರ ಮಹತ್ವದ್ದಾಗಿದೆ. 


ಸುದ್ದಿ ಓದಿ