ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ: ಶ್ರೀಮಂತ ಪಾಟೀಲ
ಲೋಕದರ್ಶನ ವರದಿ
ಕಾಗವಾಡ 06: ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿ, ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಅರುಣ್ ಶಹಾಪುರ ಇಬ್ಬರು ಒಳ್ಳೆಯ ಅಭ್ಯರ್ಥಿಗಳಾಗಿದ್ದು ಸರಳ ಸಜ್ಜನಿಕೆ ಅದರೊಂದಿಗೆ ಪ್ರತಿಯೊಬ್ಬರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳನ್ನು ಈಡೇರಿಸುವ ಗುರಿ ಹೊಂದಿರುವ ಅಭ್ಯರ್ಥಿಗಳಿಗೆ ಮತಚಲಾಯಿಸಿರಿ. ಕ್ಷೇತ್ರದಲ್ಲಿ 550 ಶಿಕ್ಷಕ ಮತದಾರರಿದ್ದು 14 ನೂರು ಪದವೀಧರ ಮತದಾರರಿದ್ದಾರೆ. ಎಲ್ಲ ಮತದಾರರು ನಮ್ಮ ಅಭ್ಯರ್ಥಿಗಳ ಪರ ಒಲವು ತೋರಿದ್ದು ಇವರ ವಿಜಯ ಖಚಿತ ಎಂದು ಶಾಸಕ ಶ್ರೀಮಂತ ಪಾಟೀಲರು ಹೇಳಿದರು.
ಸೋಮವಾರ ಬೆಳಗ್ಗೆಯಿಂದ ಶಾಸಕ ಶ್ರೀಮಂತ ಪಾಟೀಲರು ಬಿಜೆಪಿ ಪಕ್ಷದ ಕಾಗವಾಡ ಘಟಕ ಅಧ್ಯಕ್ಷ ತಮ್ಮನ್ನಾ ಪಾರ್ಶೆಟ್ಟಿ, ಅಥಣಿ ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಶೀತಲಗೌಡಾ ಪಾಟೀಲ್ ಸೇರಿದಂತೆ ನೂರಾರು ಕಾರ್ಯಕರ್ತರೊಂದಿಗೆ ಪ್ರಚಾರ ಕೈಗೊಂಡರು.
ಕಾಗವಾಡ ವಿಧಾನಸಭಾ ಮತಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲರು ಕ್ಷೇತ್ರದಲ್ಲಿಯೇ ಎಲ್ಲಾ ಶಾಲೆಗಳ ಶಿಕ್ಷಕರಿಗೆ ಹಾಗೂ ಪದವೀಧರೆ ಮತದಾರರನ್ನು ಭೇಟಿಯಾಗಿ ಅದ್ದೂರಿ ಪ್ರಚಾರ ಸಭೆಗಳನ್ನು ಕೈಗೊಂಡರು.
ಬೆಳಿಗ್ಗೆಯಿಂದ ಐನಾಪುರ, ಮೋಳೆ, ಕಾಗವಾಡ, ಉಗಾರ್, ಶಿರಗುಪ್ಪಿ, ಜುಗುಳ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಎಲ್ಲ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರಿಗೆ ಹಾಗೂ ಪದವೀಧರ ಮತದಾರರನ್ನು ಭೇಟಿಯಾಗಿ ಪ್ರಚಾರ ಕೈಗೊಂಡರು.
ಅಥಣಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶೀತಲಗೌಡ ಪಾಟೀಲ್ ಮಾತನಾಡಿ ಕಾಗವಾಡ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ಇಲ್ಲಿಯ ಮತದಾರರು ಅಧಿಕ ಸಂಖ್ಯೆಯಿಂದ ಮತ ಚಲಾಯಿಸಲಿದ್ದಾರೆ. ಇವರ ವಿಜಯ ಖಚಿತ ಎಂದು ಸ್ಪಷ್ಟಪಡಿಸಿದರು.
ಉಗಾರ ಪೀಪಲ್ಸ್ ಎಜುಕೇಶನ್ ಸಂಸ್ಥೆಯ ಕಾರ್ಯದರ್ಶಿ ರಾಮಚಂದ್ರ ಕಿಲ್ಲೆದಾರ್ ಇವರು ಶಾಸಕರನ್ನು ಸನ್ಮಾನಿಸಿ ಅಭಿನಂದಿಸಿದರು.
ಬಿಬಿಎ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಶಾಂತ್ ಜಕ್ಕಣ್ಣವರ್, ಶ್ರೀಹರಿ ಮಹಾವಿದ್ಯಾಲಯದ ಪ್ರಾಚಾರ್ಯ ಮೇಘನಾ ಕುಲಕರ್ಣಿ, ಪಿ.ಬಿ ಕುಲಕರ್ಣಿ, ತಮ್ಮನ್ನ ಪಾರಶೆಟ್ಟಿ, ರಾಜೇಂದ್ರ ಪೋತದಾರ, ಯೋಗೇಶ್ ಕುಂಬಾರ್, ರಾಕೇಶ್ ಪಾಟೀಲ್, ಪುರಸಭೆ ಸದಸ್ಯರು, ಬಿಜೆಪಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.