ಉರಿಬಿಸಿಲಿನ ಬೇಗೆ: ಲಿಂಬೆ ಬೆಲೆ ಗಗನಕ್ಕೆ
ಒಂದು ನಿಂಬೆ ಹಣ್ಣಿಗೆ 10 ರೂ,: ಬಿಸಿ ಮುಟ್ಟಿಸುತ್ತಿದೆ ದಾಹ ತಣಿಸುವ ತಣ್ಣನೆಯ ಪಾನಕ
ಮಾಂಜರಿ ದಿ 13 : ಮಾರ್ಚ ಮಧ್ಯದಿಂದ ಎಪ್ರಿಲ್ನಲ್ಲಿ ಬಿಸಿಲಿನ ತಾಪಮಾನ ಅತ್ಯಂತ ಏರಿಕೆಯಾಗಿ ಉರಿಬಿಸಿಲಿನ ತಾಪ ಅಸಹನೀಯವಾಗುತ್ತಿದೆ. ದಿನದಿಂದ ದಿನಕ್ಕೆ ತಾಪಮಾನ ಏರುತ್ತಲೇ ಇದೆ. ಇಂತಹ ಬಿರುಬಿಸಿಲಿನ ಶಖೆ ಕಡಿಮೆ ಮಾಡಿಕೊಳ್ಳಲು ಜನ ಸಹಜವಾಗಿ ತಂಪು ಪಾನೀಯಗಳತ್ತ ಮುಖ ಮಾಡುವುದು ಸಹಜ. ಏಳ ನೀರು, ಲಿಂಬೆ ಪಾನಕ ಜ್ಯೂಸ್ ಮೊದಲಾದ ಪೇಯಗಳನ್ನು ಸೇವೀಸಿ ಸ್ವಲ್ಪ ಶರೀರವನ್ನು ತಣ್ಣಗೆ ಮಾಡಿಕೊಳ್ಳುತ್ತಾರೆ. ತಣ್ಣನೆಯ ಲೆಮನ್ ಸಿರಪ್ ಕುಡಿದರೆ ಮನಸ್ಸು ಸ್ವಲ್ಪ ಪ್ರಶಾಂತವಾಗುತ್ತದೆ. ಆದರೆ ಈಗ ನಿಂಬೆ ಹಣ್ಣಿನ ಬೆಲೆ ಏರಿಕೆಯಿಂದ ಹೊಟ್ಟೆ ತಣ್ಣಗಾಗುವುದಿರಲಿ. ಅದರ ಬೆಲೆಯ ಬಿಸಿಹೆಚ್ಚಾಗುತ್ತಿದೆ. ಒಂದು ಲಿಂಬೆ 10ರೂ. ಬೆಲೆ ಬಾಳುತ್ತಿದೆ.
ಬಾಗಲಕೋಟೆ, ವಿಜಯಪುರದಲ್ಲಿ ಈಗ ನಿಂಬೆಹಣ್ಣು ಉತ್ಪಾದನೆ ಕಡಿಮೆ ಆಗಿದೆ. ಇದರಿಂದ ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿನ ಬೆಲೆ ಜನಸಾಮಾನ್ಯರಿಗೆ ಕೈಗೆಟುಕದಂತಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ನಿಂಬೆ ಹಣ್ಣಿಗೆ 10 ರೂಪಾಯಿ ಇದೆ. ಇದರಿಂದ ಬೇಸಿಗೆಯಲ್ಲಿ ತಂಪು ನಿಂಬೆ ಪಾನಕವೂ ದುಬಾರಿಯಾಗಿದೆ.
ಈ ನಿಟ್ಟಿನಲ್ಲಿ ನಿಂಬೆ ಹಣ್ಣಿನ ಮಾರಾಟಗಾರ ಮಹಮ್ಮದ್ ಬೇಪಾರಿ ಮಾತನಾಡಿ, ಬೇಸಿಗೆಯಿಂದಾಗಿ ನಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚುತ್ತಿದ್ದರೂ ನಿಂಬೆ ಬೆಲೆ ಏರಿಕೆಯಿಂದ ಒಂದು ನಿಂಬೆ ಹಣ್ಣಿಗೆ ಹತ್ತು ರೂಪಾಯಿ ಇದೆ. 50 ರೂಪಾಯಿಗೆ ಆರು ನಿಂಬೆಹಣ್ಣು ಕೊಡುತ್ತಿದ್ದೇವೆ. ಹೊಟೆಲ್ಗಳ ಜತೆಗೆ ತಂಪು ಪಾನೀಯ ಅಂಗಡಿಗಳಿಂದಲೂ ಲಿಂಬೆಗೆ ಬೇಡಿಕೆ ಹೆಚ್ಚಿದೆ.
50 ರೂ.ಗೆ 5 ರಿಂದ 6 ನಿಂಬೆಹಣ್ಣು ದರವಿದೆ ಎನ್ನುತ್ತಾರೆ ಮತ್ತೊಬ್ಬ ಮಾರಾಟಗಾರ ಗುಲಾಂ ರಸೂಲ್. 20 ರೂಪಾಯಿಗೆ 3ರಿಂದ 4 ಮಧ್ಯಮ ಗಾತ್ರದ ನಿಂಬೆಹಣ್ಣು ನೀಡುತ್ತಿದ್ದೇವೆ. ಬಿಜಾಪುರ, ಬಾಗಲಕೋಟೆ ಮುಂತಾದ ಕಡೆ ನಿಂಬೆ ಹಣ್ಣಿನ ಉತ್ಪಾದನೆ ಕಡಿಮೆಯಾಗಿದ್ದು, ಆಗಮನವೂ ಕುಂಠಿತವಾಗಿದೆ. ಇದರಿಂದ ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿನ ಬೆಲೆ ಹೆಚ್ಚಾಗಿದೆ ಎಂದರು.
ಒಟ್ಟಿನಲ್ಲಿ ಬೇಸಿಗೆಯಲ್ಲಿ ನಿಂಬೆಹಣ್ಣಿನ ಮಹತ್ವ ಹಾಗೂ ದಿನನಿತ್ಯದ ಬಳಕೆ ಅನನ್ಯ. ಆದರೆ ಈ ನಿಂಬೆಹಣ್ಣು ದುಬಾರಿಯಾಗಿರುವುದರಿಂದ ಖರೀದಿಗೆ ಗ್ರಾಹಕರ ನೂಕು ನುಗ್ಗಲು ಇಲ್ಲ