ಜ್ಞಾನ-ವಿಜ್ಞಾನಗಳ ಸಂಗಮವೇ ವಿಜ್ಞಾನಮೇಳ: ಬಗಲಿ
ಇಂಡಿ: ಇಂದಿನ ಸ್ಪರ್ಧಾಯುಗದಲ್ಲಿ “ವಿಜ್ಞಾನ ಮೇಳ” ದಂತಹ ಕಾರ್ಯಕ್ರಮಗಳು ಬಹಳ ಅವಶ್ಯವಾಗಿದೆ. ಜ್ಞಾನ-ವಿಜ್ಞಾನಗಳ ಸಂಗಮವೇ ಈ ವಿಜ್ಞಾನಮೇಳವಾಗಿದ್ದು, ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಹೊರತರಲು ಇಂತಹ ವೈಜ್ಞಾನಿಕ ಮೇಳ ಆಯೋಜಿಸುವುದು ಅವಶ್ಯಕವಾಗಿದೆ ಎಂದು ಶಾಂತೇಶ್ವರ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ ಹೇಳಿದರು.
ಅವರು ಗುರುವಾರ ಪಟ್ಟಣದ ಶಾಂತೇಶ್ವರ ಶಿಕ್ಷಣ ಸಂಸ್ಥೆ ಅಡಿಯಲ್ಲಿರುವ ಶಾಂತೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಚಲಿತ ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಈ ವಿಜ್ಞಾನ ಮೇಳದ ಉದ್ದೇಶಗಳಲ್ಲಿ ಒಂದಾಗಿದೆ. ವಿಜ್ಞಾನ ವಿಷಯಗಳು ಮಕ್ಕಳಲ್ಲಿ ವಿಸ್ಮಯ ಮೂಡಿಸುತ್ತವೆ. ಮೌಢ್ಯತೆಯನ್ನು ಅಳಿಸಿ ವೈಜ್ಞಾನಿಕ ಚಿಂತನೆಗಳನ್ನು ಬಿತ್ತಿ ಬೆಳೆಸಬೇಕು ಎಂದರು.
ಸಂಸ್ಥೆಯ ಸಹಕಾರ್ಯದರ್ಶಿ ಸಿದ್ದಣ್ಣ ತಾಂಬೆಯವರು ಮಾತನಾಡಿ ಮಕ್ಕಳಲ್ಲಿ ವೈಜ್ಞಾನಿಕ ಕೌಶಲ್ಯ ಬೆಳೆಸುವುದು ಇಂದಿನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸ್ಪೂರ್ತಿ ತುಂಬುತ್ತದೆ ಹಾಗೂ ವೈಜ್ಞಾನಿಕ ಕಲಿಕೆಗೆ ಪೂರಕವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ ಅತಿಥಿ ಸ್ಥಾನ ವಹಿಸಿಕೊಂಡಿದ್ದರು. ಶಾಲೆಯ ಮುಖ್ಯಗುರು ಅಶೋಕ.ಬಿ.ಬಿರಾದಾರ, ಸಂಯೋಜಕರಾದ ಫರಾ್ಹ ರಬ್ಬಾನಿ ಮಾತನಾಡಿದರು. ಮಾಧ್ಯಮಿಕ ವಿಭಾಗದ ಶಿಕ್ಷಕ ಎಸ್.ಎಸ್.ಇಂಗಳೇಶ್ವರ, ಐ.ಟಿ.ಐ ಪ್ರಾಂಶುಪಾಲ ಆನಂದ ಗೌಡಗಾವಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಮ್.ಜೆ.ಬಿರಾದಾರ ನಿರೂಪಿಸಿದರು, ಶಾಂತಲಾ ಮದರಖಂಡಿ ವಂದಿಸಿದರು, ಎ.ಜೆ.ಜಮಾದಾರ, ಶಾಂತಾ ಸಾಸ್ವೇಕರ, ಎಮ್.ಎಸ್.ಖಸ್ಕಿ, ಆಕಾಶ ಜಾಡರ್ ಹಾಗೂ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.