ಶಾಲೆಗಳು ದೇವಾಲಯ, ಮಕ್ಕಳು ದೇವರ ಸಮಾನ: ಸಂಗೊಳ್ಳಿ
ಬೈಲಹೊಂಗಲ 13: ಶಾಲೆಗಳು ದೇವಾಲಯವಿದ್ದಂತೆ. ಮಕ್ಕಳು ದೇವರ ಸಮಾನರು. ಮಕ್ಕಳಿಗೆ ನಿಸ್ವಾರ್ಥದಿಂದ ಸೇವೆ ಮಾಡಿದರೆ ಒಳ್ಳೆಯದಾಗುತ್ತದೆಂದು ಗಣ್ಯರು, ನಿವೃತ್ತ ಶಿಕ್ಷಕರಾದ ಕೆ.ಎಂ.ಸಂಗೊಳ್ಳಿ ಹೇಳಿದರು.
ಪಟ್ಟಣದ ಪುರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ಯುವ ಮುಖಂಡ ಶ್ರೀಶೈಲ ಯಡಳ್ಳಿ ಅವರ ಪುತ್ರಿ ಆರಾಧ್ಯಾ ಯಡಳ್ಳಿ ಅವರ 8ನೇ ವರ್ಷದ ಜನ್ಮದಿನಾಚರಣೆ ನಿಮಿತ್ತ ಶಾಲಾ ಮಕ್ಕಳಿಗೆ ಉಚಿತವಾಗಿ ಬುಕ್, ಕಂಪಾಸ್ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿ, ಜನ್ಮದಿನಾಚರಣೆ ಹೆಸರಿನಲ್ಲಿ ದುಂದು ವೆಚ್ಚಗಳನ್ನು ಮಾಡುವುದರ ಬದಲು ಇಂತಹ ಸಾಮಾಜಿಕ ಕಾರ್ಯಗಳನ್ನು ಮಾಡುವುದು ಒಳ್ಳೆಯ ಕಾರ್ಯವಾಗಿದೆ. ಸದಾ ಸಮಾಜಕ್ಕಾಗಿ ಮಿಡಿಯುವ ಹೃದಯವಂತಿಕೆ ಕುಟುಂಬ ಶ್ರೀಶೈಲ ಯಡಳ್ಳಿ ಅವರದ್ದಾಗಿದೆ. ಹಿರಿಯರು ಹಾಕಿಕೊಟ್ಟಿರುವ ಮಾರ್ಗವನ್ನು ಶ್ರೀಶೈಲ ಯಡಳ್ಳಿ ಅವರು ಅನುಸರಿಸುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯ ಶಿಕ್ಷಕರಾದ ಈಶ್ವರ ಹೋಟಿ, ಎಂ.ಸಿ.ಹಂಗರಕಿ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 60 ಸಾವಿರ ಮೌಲ್ಯದ 300 ಕ್ಕೂ ಹೆಚ್ಚು ಕ್ಯಾಮ್ಲಿನ್ ಕಂಪಾಸು, ಒಂದು ಸಾವಿರ ಸುಲೇಖಾ ನೋಟ್ ಬುಕ್ಗಳನ್ನು ಮಕ್ಕಳಿಗೆ ಕಾಣಿಕೆಯಾಗಿ ಶ್ರೀಶೈಲ ಯಡಳ್ಳಿ ನೀಡಿದ್ದಾರೆಂದು ತಿಳಿಸಿದರು.
ಶ್ರೀಶೈಲ ಯಡಳ್ಳಿ ಮಾತನಾಡಿ, ಎಂಸ್ಸೆಸ್ಸೆಆರ್ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ, ಸಾಮಾಜಿಕ ಚಿಂತನೆಗಳ ಜತೆಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡುತ್ತಿರುವ ಶಿಕ್ಷಕರ ಕಾರ್ಯ ಶ್ಲಾಘನೀಯ. ಇಲ್ಲಿನ ಶಿಕ್ಷಕರು ನಿಸ್ವಾರ್ಥದಿಂದ ಸೇವೆ ಮಾಡುತ್ತಿರುವುದು ನಾಡಿನಲ್ಲಿ ಎಲ್ಲೆಡೆ ಪ್ರಶಂಸೆಗೆ ಒಳಗಾಗಿದೆ ಎಂದರು.
ಮುಖ್ಯಾಧ್ಯಾಪಕ ಎಂ.ವ್ಹಿ.ನಾಗನೂರ ಅಧ್ಯಕ್ಷತೆವಹಿಸಿದ್ದರು.
ಇದೇ ವೇಳೆ ಯುವ ಮುಖಂಡ ಶ್ರೀಶೈಲ ಯಡಳ್ಳಿ ಮತ್ತು ರೂಪಾ ದಂಪತಿಯನ್ನು ಶಾಲೆಯಿಂದ ಸತ್ಕರಿಸಲಾಯಿತು. ಶಿಕ್ಷಕರಾದ ಬಿ.ಟಿ.ಗುರಕನವರ, ಎಚ್.ಟಿ.ಭಜಂತ್ರಿ, ಪಿ.ಟಿ.ಹಸರಂಗಿ, ಸುಲೋಚನಾ ಹೊಸಮನಿ, ಕಿರಣ ದಂಡಾವತಿಮಠ, ವಿಜಯಲಕ್ಷ್ಮೀ ಕುಲಕರ್ಣಿ, ವಿಜಯಾ ಹಸರಂಗಿ, ಚಂದ್ರಶೇಖರಯ್ಯ ಆರಾದ್ರಿಮಠ, ಸೋಮನಿಂಗ ತೋಟಗಿ, ಮಹೇಶ ಲಿಂಬೆಣ್ಣವರ, ನಿಂಗರಾಜ ಈಟಿ, ಶಂಕರ ಮಾಸೆಟ್ಟಿ, ರಾಜು ಅಜ್ಜಪ್ಪನವರ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಬಿ.ಆರ್.ಬೋರಗಲ್ ನಿರೂಪಿಸಿದರು. ವಿದ್ಯಾರ್ಥಿ ನಿಧಾ ಗುರ್ಲಹೊಸೂರ ವಂದಿಸಿದರು.