ಅಂಗನವಾಡಿ ಕೇಂದ್ರಗಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ
ರಾಣಿಬೆನ್ನೂರ 21: ಸರಕಾರಿ ಶಾಲೆಗಳ ಬಗ್ಗೆ ಕೀಳುರಿಮೆ ಬೇಡ, ಸರಕಾರಿ ಶಾಲೆಯಲ್ಲಿ ಕಲಿತವರೇ ಹೆಚ್ಚಾಗಿ ಉನ್ನತ ಹುದ್ದೆಯಲ್ಲಿದ್ದಾರೆ ಎಲ್ಲರೂ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಡಾ. ಶಾಂತಸೋಮೇಶ್ವರ ಮಹಾಸ್ವಾಮಿಗಳು ಹೇಳಿದರು.
ಶುಕ್ರವಾರ ರಾತ್ರಿ ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ನಡೆದ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಮೂಲಕ ಅವರಿಗೆ ಉತ್ತಮ ಸಂಸ್ಕಾರ ರೂಢಿಸಬೇಕು ಅಂದಾಗ ಮಕ್ಕಳು ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯ ಎಂದರು.
ನ್ಯಾಯವಾದಿ ವಿಠ್ಠಲ ಪುಠಾಣಿಕರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅದ್ಧೂರಿಯಾಗಿ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಂಡಿರುವುದು ಶ್ಲ್ಯಾಘನೀಯ ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆ ಯಾವುದರಲ್ಲೂ ಕಡಿಮೆ ಇಲ್ಲ ಎಂಬ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ಜೆಡಿಎಸ್ ಮುಖಂಡ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಖಾಸಗಿ ಶಾಲೆಗಳು ವ್ಯಾಪಾರೀಕರಣದತ್ತ ಮುಖ ಮಾಡಿವೆ ಆದರೆ ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ ಎಲ್ಲರೂ ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ ಎಂದು ಮನವಿ ಮಾಡಿದರು.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಡಾ. ತ್ರಿನೇತ್ರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಜಿ.ವಿ.ದೀಪಾವಳಿ ಹಾಗೂ ಸುರೇಶ ದಳವಾಯಿ ಮಾತನಾಡಿದರು, ಎಸ್ಡಿಎಂಸಿ ಸದಸ್ಯರು, ಗ್ರಾಪಂ ಸದಸ್ಯರು, ಶಾಲಾ ಶಿಕ್ಷಕರು ಸಿಬ್ಬಂಧಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.