ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ: ಸತೀಶ ಜಾರಕಿಹೊಳಿ
ಅಥಣಿ 14: ಈಗಲೂ ಬಿ.ಎಸ್.ಯಡಿಯುರ್ಪನವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಅವರು ಮುಖ್ಯಮಂತ್ರಿಯಾಗಿ ಈ ಅವಧಿ ಮುಗಿಯುವವರೆಗೂ ಮುಂದುವರೆಯಲಿ ಎನ್ನುವುದೇ ನಮ್ಮ ಆಶಯವಾಗಿದೆ ಎಂದು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಅವರು ಅಥಣಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಚಿಕಿತ್ಸಾ ಘಟಕ ಪರೀಶೀಲಿಸಿ ಮಾತನಾಡುತ್ತಿದ್ದರು,
ಯಡಿಯುರ್ಪನವರನ್ನು ಅಧಿಕಾರದಿಂದ ಇಳಿಸುವ ಯತ್ನ ಕಾಂಗ್ರೆಸ್ ಮಾಡುವುದಿಲ್ಲ ಆದರೆ ಅವರ ಪಕ್ಷ ಕೈಗೊಳ್ಳುವ ನಿರ್ಧಾರ ನಮಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ ಅವರು ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯಾಗುತ್ತಿದೆ ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ತೈಲ ಬೆಲೆ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ ಸಂಕಷ್ಟದಲ್ಲಿರುವ ಎಲ್ಲರೂ ಕೂಡ ಕೇಂದ್ರದ ಮೇಲೆ ಒತ್ತಡ ಹೇರಿದಾಗ ಮಾತ್ರ ತೈಲ ಬೆಲೆ ಇಳಿಸಲು ಸಾಧ್ಯ ಎಂದರು.
ಕೋವಿಡ್ ಹೆಚ್ಚಾದ ಸಂದರ್ಭದಲ್ಲಿ ರೆಮ್ಡಿಸೀವಿರ್ ಮತ್ತು ಆಕ್ಸಿಜನ್ ಕಿಟ್ಟಗಳು ಕಳ್ಳ ದಾರಿಯಿಂದ ಹೆಚ್ಚಿನ ಬೆಲೆಗೆ ಮಾರಾಟವಾಗಿವೆ ಈ ನಿಟ್ಟಿನಲ್ಲಿ ಪೊಲೀಸರು ಅಂತಹ ಕಳ್ಳರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದ ಅವರು ಇದು ಕೇವಲ ಪೊಲೀಸ್ ಅಥವಾ ಸರಕಾರ ಮಾಡಬೇಕಂತಲ್ಲ ನಾವೆಲ್ಲರೂ ಸಹ ಕೈ ಜೋಡಿಸಬೇಕು ಎಂದರು.
ಇದಕ್ಕೂ ಮೊದಲು ಸತೀಶ ಜಾರಕಿಹೊಳಿ ಅಥಣಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕಾಗೆ ಹಾಗೂ ತಹಶೀಲ್ದಾರ ಕೋಮಾರ ಇವರೊಂದಿಗೆ ಕೋವಿಡ್ ರೋಗಿಗಳ ಚಿಕಿತ್ದೆ, ಬೆಡ್ ಹಾಗೂ ಆಕ್ಸಿಜನ್ ಕುರಿತಾಗಿ ಚರ್ಚಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ವೀರಕುಮಾರ ಪಾಟೀಲ, ಧುರೀಣರಾದ ಗಜಾನನ ಮಂಗಸೂಳಿ, ಸದಾಶಿವ ಬುಟಾಳಿ, ಸಿದ್ಧಾರ್ಥ ಸಿಂಗೆ, ಶ್ರೀಕಾಂತ ಪೂಜಾರಿ, ರಮೇಶ ಸಿಂದಗಿ, ಸತ್ಯಪ್ಪ ಬಾಗೆನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.