ಸಂಕ, ಹುಕ್ಕೇರಿ ಬಹುಮತದಿಂದ ಆಯ್ಕೆ: ಮಂಗಸೂಳಿ
ಅಥಣಿ: ವಾಯವ್ಯ ವಿಧಾನ ಪರಿಷತ್ ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಸುನೀಲ ಸಂಕ ಹಾಗೂ ಪ್ರಕಾಶ ಹುಕ್ಕೇರಿಯವರು ಬಹುಮತದಿಂದ ಆಯ್ಕೆಯಾಗುವುದು ನಿಶ್ಚಿತ ಎಂದು ಅಥಣಿ ವಿಧಾನ ಸಭೆ ಉಪ ಚುನಾವಣೆಯ ಅಭ್ಯರ್ಥಿ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಸ್ಥಳೀಯ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ವಿಧಾನ ಪರಿಷತ್ನ ಪದವಿಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಹಣಮಂತ ನಿರಾಣಿ ಹಾಗೂ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಅರುಣ ಶಹಾಪೂರ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಕೆಲಸ ಮಾಡದೇ ಇದ್ದುದರಿಂದ ಈ ಇಬ್ಬರಿಗೂ ಪ್ರಸಕ್ತ ಚುನಾವಣೆಯಲ್ಲಿ ಸೋಲಾಗಲಿದೆ ಎಂದ ಅವರು ಹಣಮಂತ ನಿರಾಣಿಯವರು ಕಳೆದ 6 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರೂ ಕೂಡ ನಿರುದ್ಯೋಗಿ ಪದವಿಧರರ ಸಮಸ್ಯೆಗಳಿಗೆ ಸ್ಪಂದಿಸಲೇ ಇಲ್ಲ ಅಲ್ಲದೆ ಕಳೆದ 12 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಅರುಣ ಶಹಾಪೂರ ಶಿಕ್ಷಕರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಅಷ್ಟೇ ಅಲ್ಲ ಶಿಕ್ಷಕರ ಮೋಬೈಲ್ ಕೂಡ ರೀಸೀವ್ ಮಾಡಿಲ್ಲ ಹೀಗಾಗಿ ಈ ಇಬ್ಬರೂ ಕೂಡ ಸೋಲುವುದು ಖಚಿತ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಕೂಡ ಜಯಶಾಲಿಗಳಾಗುತ್ತಾರೆ ಎಂದರು.
ವಾಯವ್ಯ ಪದವಿಧರ ಕ್ಷೇತ್ರದ ಅಭ್ಯರ್ಥಿ ಸುನೀಲ ಸಂಕ ಮಾತನಾಡಿ, ಕಳೆದ ಕೆಲ ದಿನಗಳಿಂದ ವಿಜಯಪೂರ, ಬೆಳಗಾವಿ, ಬಾಗಲಕೋಟ್ ಜಿಲ್ಲೆಗಳ 33 ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡ ನನಗೆ ಸರಕಾರಿ, ಖಾಸಗಿ ನೌಕರ, ವಕೀಲರು, ಬ್ಯಾಂಕ ನೌಕರರು, ಶಿಕ್ಷಕರು ಸೇರಿದಂತೆ ಎಲ್ಲ ವರ್ಗದ ಮತದಾರರಿಂದಲೂ ಬೆಂಬಲ ದೊರಕಿದೆ. ಎಲ್ಲ ಮತದಾರರಿಗೆ ಹಣಮಂತ ನಿರಾಣಿ ಕಾರ್ಯವೈಖರಿ ಮೇಲೆ ಅಸಮಾಧಾನ ಇದೆ. ಕರೋನಾದಂತಹ ಸಮಯದಲ್ಲೂ ಕೂಡ ನಮ್ಮ ಸಮಸ್ಯೆಗಳಿಗೆ ನಿರಾಣಿ ಸ್ಪಂದಿಸಿಲ್ಲ ಎಂದ ಅವರು ಹಣಮಂತ ನಿರಾಣಿಯವರು ಈ ಬಾರಿಯ ಚುನಾವಣೆಯಲ್ಲಿ ಎಷ್ಟೆ ಸುಳ್ಳು ಹೇಳಿ ನಮ್ಮ ಮನ ಒಲಿಕೆಗೆ ಪ್ರಯತ್ನಿಸಿದರೂ ಕೂಡ ಯಾವುದೇ ಪ್ರಯೋಜನ ಆಗುವುದಿಲ್ಲ ಎನ್ನುವ ಅಭಿಪ್ರಾಯ ಎಲ್ಲ ಮತದಾರರಿಂದ ಬಂದಿದೆ ಹೀಗಾಗಿ ನನಗೆ ವ್ಯಾಪಕವಾಗಿ ಬೆಂಬಲ ದೊರಕಿದೆ ಎಂದರು.
ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪೂರ ಈಗಾಗಲೇ ಸೋಲು ಒಪ್ಪಿಕೊಂಡಂತಾಗಿದೆ ಹೀಗಾಗಿ ಪದವಿಧರ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಸುಳ್ಳು ಕಥೆಗಳನ್ನು ಕಟ್ಟಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಆದರೆ ಬಿಜೆಪಿಯ ಯಾವುದೇ ಸುಳ್ಳು ಆರೋಪ ಪ್ರಜ್ಞಾವಂತ ಮತದಾರರ ಮೇಲೆ ಪರಿಣಾಮ ಬೀರುವುದಿಲ್ಲ ಎಂದ ಅವರು ನಿರಾಣಿ ಕುಟುಂಬ ಬಂಡವಾಳ ಶಾಹಿಯಾಗಿದ್ದು, ಇವರಿಗೆ ಬಡ ಪದವಿಧರರ ಸಮಸ್ಯೆಗಳ ಬಗೆಗೆ ಅರ್ಥವಾಗುವುದಿಲ್ಲ ಇಂತಹ ಅಭ್ಯರ್ಥಿಗೆ ಮತ ನೀಡುವ ಬದಲು ಸೃಜನ ಶೀಲ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಧುರೀಣರಾದ ಅನೀಲ ಸುಣಧೋಳಿ, ಬಸವರಾಜ ಬುಟಾಳಿ, ಸಂದೀಪ ಬೆಳಗಲಿ, ಅಸ್ಲಂ ನಾಲಬಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.