ಗರ್ಭಧಾರಣೆಯ ಬಳಿಕ ಮಹಿಳೆಯರ ದೇಹದ ಬಗ್ಗೆ ಟೀಕಿಸುವ ಟ್ರೋಲ್‌ಗಳ ವಿರುದ್ಧ ಸಲ್ಮಾನ್ ಖಾನ್ ಕಿಡಿ

ಗರ್ಭಧಾರಣೆಯ ಬಳಿಕ ಮಹಿಳೆಯರ ದೇಹದ ಬಗ್ಗೆ ಟೀಕಿಸುವ ಟ್ರೋಲ್‌ಗಳ ವಿರುದ್ಧ ಸಲ್ಮಾನ್ ಖಾನ್ ಕಿಡಿ Salman Khan slams online trolls over body-shaming of women after pregnancy

ಮುಂಬೈ, ಸೆ. 20 : ಆನ್‌ಲೈನ್ ಟ್ರೋಲಿಂಗ್ ಹಾಗೂ ದೇಹದ ಕುರಿತ ಟೀಕೆಗಳ ಸಂಸ್ಕೃತಿಯನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಖಂಡಿಸಿದ್ದಾರೆ. ವಿಶೇಷವಾಗಿ ಗರ್ಭಧಾರಣೆಯ ಬಳಿಕ ಮಹಿಳೆಯರ ತೂಕ ಹೆಚ್ಚಾಗುವುದನ್ನು ಟೀಕಿಸುವವರ ವಿರುದ್ಧ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಬಿಗ್ ಬಾಸ್ 20’ರ ಇತ್ತೀಚಿನ ಸಂಚಿಕೆಯಲ್ಲಿ ಅವರು ಈ ಕುರಿತು ಮಾತನಾಡಿದರು.

‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ಸ್ಪರ್ಧಿಗಳನ್ನುದ್ದೇಶಿಸಿ ಮಾತನಾಡಿದ ಸಲ್ಮಾನ್ ಖಾನ್, ಹೆರಿಗೆಯ ಬಳಿಕ ಮಹಿಳೆಯರ ದೇಹದಲ್ಲಿ ಸಹಜವಾಗಿ ಬದಲಾವಣೆಗಳು ಉಂಟಾಗುತ್ತವೆ. ಈ ಕಾರಣಕ್ಕಾಗಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುವುದು ಏಕೆ ಎಂದು ಪ್ರಶ್ನಿಸಿದರು. ನಟಿಯರು ಮತ್ತೆ ಕೆಲಸಕ್ಕೆ ಮರಳಲು ಸಿದ್ಧರಾದಾಗ ತಮ್ಮ ಫಿಟ್ನೆಸ್‌ ಕಡೆ ಗಮನ ಹರಿಸಬಹುದು ಎಂದು ಅವರು ಹೇಳಿದರು.

“ಗರ್ಭಿಣಿಯಾದವರನ್ನು ಏಕೆ ಟ್ರೋಲ್ ಮಾಡುತ್ತೀರಿ? ಗರ್ಭಿಣಿಯಾದ ನಂತರ ಎಲ್ಲರೂ ತೂಕ ಹೆಚ್ಚಿಸಿಕೊಳ್ಳುತ್ತಾರೆ. ಗರ್ಭಿಣಿಯಾಗಿದ್ದರಿಂದ ತೂಕ ಹೆಚ್ಚಾಗಿದೆ. ಮತ್ತೆ ಸಿನಿಮಾಗಳಿಗೆ ಬಂದಾಗ ಫಿಟ್ ಆಗುತ್ತಾರೆ. ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸಿದ್ದರು,” ಎಂದು ಸಲ್ಮಾನ್ ಹೇಳಿದರು.

ಸೆಲೆಬ್ರಿಟಿಗಳ ವಯಸ್ಸು ಮತ್ತು ದೇಹದ ಬಗ್ಗೆ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಟೀಕೆಗಳ ಬಗ್ಗೆಯೂ ಸಲ್ಮಾನ್ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮದ ವೇಳೆ ತಮ್ಮ ಟೋಪಿ ಮತ್ತು ಟಿ-ಶರ್ಟ್ ತೆಗೆದು, ಮೇಕಪ್ ಆರ್ಟಿಸ್ಟ್ ರಾಜುವನ್ನು ಕರೆಸಿ ತಮ್ಮ ಮೇಕಪ್ ತೆಗೆಯುವಂತೆ ಹೇಳಿದರು. ಈ ಮೂಲಕ ಇಂಟರ್‌ನೆಟ್‌ನಲ್ಲಿ ಸೆಲೆಬ್ರಿಟಿಗಳ ನೋಟದ ಬಗ್ಗೆ ನಿರಂತರವಾಗಿ ಕಾಮೆಂಟ್ ಮಾಡುವವರನ್ನು ಪ್ರಶ್ನಿಸುವ ಪ್ರಯತ್ನ ಮಾಡಿದರು.

ಅಂಬಾನಿಗಳ ಗಣೇಶ ಚತುರ್ಥಿ ಆಚರಣೆಯಲ್ಲಿ ನಟಿ ಕತ್ರಿನಾ ಕೈಫ್ ಕಾಣಿಸಿಕೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅವರ ದೇಹದ ತೂಕದ ಬಗ್ಗೆ ಕೆಲವರು ಕಾಮೆಂಟ್ ಮಾಡಿದ್ದ ಸಂದರ್ಭದಲ್ಲೇ ಸಲ್ಮಾನ್ ಖಾನ್ ಅವರ ಈ ಹೇಳಿಕೆಗಳು ಬಂದಿವೆ.

ಕತ್ರಿನಾ ಕೈಫ್ ಅವರು ನವೆಂಬರ್ 2025ರಲ್ಲಿ ವಿಯಾನ್ ಎಂಬ ಪುತ್ರನಿಗೆ ತಾಯಿಯಾಗಿದ್ದರು.