ಚಾಲಕರ ಮತ್ತು ನಿರ್ವಾಹಕರ ಮೇಲೆ ಶಿಸ್ತು ಕ್ರಮ ಜರುಗಿಸಲು ಎಸ್ಎಫ್ಐ ಆಗ್ರಹ
ರಾಣೇಬೆನ್ನೂರ 19 : ಕೋರಿಕೆ ನಿಲ್ಲುಗಡೆ ನಿಯಮ ಉಲ್ಲಂಘಿಸಿ ಸಾರಿಗೆ ಬಸ್ ನಿಲ್ಲಿಸದೇ, ವಿದ್ಯಾರ್ಥಿಗಳ ಮೇಲೆ ಹಾರಿಹಾಯ್ದು ಉದ್ಧಟತನ ಮೆರೆಯುತ್ತಿರುವ ಚಾಲಕರ ಮತ್ತು ನಿರ್ವಾಹಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ, ಭಾರತ ವಿದ್ಯಾರ್ಥಿ ಫೆಡರೇಷನ್ ತಾಲ್ಲೂಕು ಸಮಿತಿ ನೇತೃತ್ವದಲ್ಲಿ, ಪ್ರತಿಭಟಿಸಿ, ಧರಣೆ ನಡೆಸಿದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ, ಎಸ್Ùಎಫ್ ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಅವರು, ಈ ಕುರಿತಂತೆ ಈ ಹಿಂದೆ ಶಾಸಕ ಪ್ರಕಾಶ್ ಕೋಳಿವಾಡವರ ಸಮ್ಮುಖದಲ್ಲಿ ಸಂಬಂಧಿಸಿದ ಸಾರಿಗೆ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸುಧೀರ್ಘವಾಗಿ ಚರ್ಚಿಸಲಾಗಿದ್ದು, ಶಾಲಾ ಕಾಲೇಜುಗಳಿಗೆ ಪ್ರತ್ಯೇಕವಾಗಿ ಬಸ್ಸಿನ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಕೋರಲಾಗಿತ್ತು.
ಅಂದಿನಿಂದ ಮಾಕನೂರು (ಮಾಗೋಡ) ಕ್ರಾಸ್ ನಿಂದ ಖಾಲಿ ಬರುವ ಬಸ್ಸಿನಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡ ಬರಬೇಕೆಂದು ಆದೇಶಿಸಲಾಗಿತ್ತು ಅದರಂತೆ, ಡಿಪೋ ಮ್ಯಾನೇಜರ್ ಮತ್ತು ಸಿಬ್ಬಂದಿ ಒಪ್ಪಿಕೊಂಡಿದ್ದರು. ಅಂದಿನ ಒಪ್ಪಿಗೆಯಂತೆ, ವಿದ್ಯಾರ್ಥಿ ಸ್ನೇಹಿ ಸಾರಿಗೆ ಎಂದು ಹೆಸರು ಇಡಲಾಗಿತ್ತು. ಅಂದು ನಡೆದ ಸಭೆಯಲ್ಲಿ ವಿವಿಧ ಬೇಡಿಕೆಗಳನ್ನು ಸಹ ಈಡೇರಿಸಬೇಕೆಂದು ಕೋರಲಾಗಿತ್ತು ಅದಕ್ಕೂ ಸಹ ಹಸಿರು ನಿಶಾನೆ ತೋರಿಸಿದ್ದರು. ಆದರೆ ಹೇಳುವುದೊಂದು ಮಾಡುವುದು ಮತ್ತೊಂದು ಎನ್ನುವಂತೆ ಸಾರಿಗೆ ಇಲಾಖೆಯ ಡಿಪೋ ಮ್ಯಾನೇಜರ್ ಸಿಬ್ಬಂದಿ ಅನುಸರಿಸುತ್ತಿದ್ದಾರೆ ಎಂದು ಬಸವರಾಜ್ ಬಲವಾಗಿ ಆರೋಪಿಸಿದರು.
ಸಾರಿಗೆ ಇಲಾಖೆಯು ಅನುಚಿತವಾಗಿ ವರ್ತಿಸದೆ, ನಿಯಮಾನುಸಾರ ನೀಡಿದ ಹೇಳಿಕೆಯಂತೆ, ಒಪ್ಪಿಕೊಂಡ ಮಾತಿನಂತೆ, ವಿದ್ಯಾರ್ಥಿಗಳೊಂದಿಗೆ ಸೌಹಾರ್ದಯುತವಾಗಿ ವರ್ತಿಸಿ, ಪರಸ್ಪರ ಸಹಕಾರ ನೀಡಬೇಕು ಇಲ್ಲದೆ ಹೋದಲ್ಲಿ, ಭವಿಷ್ಯದ ದಿನಗಳಲ್ಲಿ, ಧರಣಿ ನಡೆಸಿ, ರಸ್ತೆ ತಡೆ ಮಾಡಿ ಪ್ರತಿಭಟನೆ ಗಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕಂಟ್ರೋಲರ್ ಉಮೇಶ್ ನಾಯಕ್, ವಿದ್ಯಾರ್ಥಿ ಮುಖಂಡರಾದ ನಂದೀಶ್ ಅಸ್ವಾಲಿ, ಗೌತಮ್ ಸಾವಕ್ಕನವರ, ರಮೇಶ್ ಕೋಡಿಹಳ್ಳಿ, ಗುರುಪಾದ ಹಲಸೂರು, ಅನಿಲ್ ಮುನವಳ್ಳಿ, ಬಸವರಾಜ ಕೊಣಸಾಲಿ, ವೀರೇಶ್ ಕಬ್ಬೂರು, ನಂದೀಶ್ ಕುರವತ್ತಿ, ರಾಹುಲ್ ಮಡಿವಾಳರ, ಗೀರೀಶ್ ಬಣಕಾರ್, ನಾಗರೆಡ್ಡಿ ಕೂಸಗೂರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.