ಶೋಷಿತರಿಗೆ ಶಿಕ್ಷಣ ದೊರಕಿಸಿದ ಮಹಾನ್ ಚೇತನ ಸಾವಿತ್ರಿ ಪುಲೆ : ಸತೀಶ್ ಜಾರಕಿಹೊಳಿ
ಗೋಕಾಕ, ಜ 3 :ಸಾವಿತ್ರಿ ಬಾಯಿ ಫುಲೆ ಅವರು ಮೇಲ್ವರ್ಗ ಜಾತಿ, ವ್ಯಕ್ತಿಗಳಿಗೆ ಮೀಸಲಾಗಿದ್ದ ಶಿಕ್ಷಣವನ್ನು ಶೋಷಿತ ಸಮುದಾಯಗಳಿಗೆ ಮುಟ್ಟಿಸುವಲ್ಲಿ ಶ್ರಮಿಸಿದ ಮಹಾನ್ ಚೇತನ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.ಇಲ್ಲಿನ ಹಿಲ್ ಗಾರ್ಡನ್ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ಸಾವಿತ್ರಿ ಬಾಯಿ ಫುಲೆ ಅವರ 190ನೇ ಜಯಂತಿ ಅಂಗವಾಗಿಯೇ ಪ್ರಬಂಧ, ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ವಿಭಿನ್ನ ಕಾರ್ಯಕ್ರಮ ಮಾಡುವ ಮೂಲಕ ಸಾವಿತ್ರಿ ಬಾಯಿ ಫುಲೆ ಅವರ ಹೋರಾಟ, ಜೀವನ ಚರಿತ್ರೆ ಕೊಡುಗೆಯನ್ನು ಪರಿಚಯ ಮಾಡುವುದಕ್ಕೆ ಗೋಕಾಕದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇಡೀ ರಾಜ್ಯ, ದೇಶದ ತುಂಬಾ ಸಾವಿತ್ರಿ ಬಾಯಿ ಫುಲೆ ಅವರ ಜಯಂತಿ ಆಚರಣೆ ಮಾಡುತ್ತಿದ್ದಾರೆ. ಅದೇ ರೀತಿ ನಮ್ಮ ಮಾನವ ಬಂಧುತ್ವ ವೇದಿಕೆ ಸಂಘಟನೆಯಿಂದಲೂ ಆಚರಣೆ ಮಾಡಲಾಗುತ್ತಿದೆ ಎಂದರು.ಸಾವಿತ್ರಿ ಪುಲೆ ಶೋಷಿತ ಸಮುದಾಯಗಳಿಗೆ ಶಿಕ್ಷಣವನ್ನು ಮುಟ್ಟಿಸುವಲ್ಲಿ ಶ್ರಮಿಸಿದರು. ಅದರ ಫಲವಾಗಿ ಸಾವಿತ್ರಿ ಬಾ ಮತ್ತು ಜ್ಯೋತಿ ಬಾ ಅಸ್ಪೃಶ್ಯ ಬಾಲಕಿಯರಿಗಾಗಿ ಶಾಲೆ ಕಟ್ಟಿದರು. ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸುಧಾರಣೆಗಳತ್ತ ಗಮನಹರಿಸುವ ಮೂಲಕ ಕೆಳವರ್ಗದ ಮತ್ತು ಮಹಿಳೆಯರ ಉನ್ನತಿಗಾಗಿ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಏಳಿದರು.ಕೇವಲ ಇಷ್ಟೇ ಅಲ್ಲದೆ ಸಾವಿತ್ರಿ ಬಾ ವಿಧವೆಯರ ಪುನರ್ವಿವಾಹದ ಪರವಾಗಿ ಧ್ವನಿ ಎತ್ತಿದ್ದರು. ಬಾಲ್ಯವಿವಾಹವನ್ನು ರದ್ದುಗೊಳಿಸಲು ಹೋರಾಡಿದರು. ಆ ಮೂಲಕ ಮಹಿಳೆಯರ ಶಿಕ್ಷಣ ಮತ್ತು ಉನ್ನತಿಗಾಗಿ ಅವರು ನೀಡಿದ ಕೊಡುಗೆ ಭಾರತೀಯ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ ಎಂದು ಹೇಳಿದರು.