ಗುಳೇಗುಡ್ಡ

ನಾವೇ ಅನ್ನುವುದು ಆರೋಗ್ಯಕರ ರಾಜಕಾರಣ ಅಲ್ಲ : ನಂಜಯ್ಯನಮಠ

ನಾವೇ ಅನ್ನುವುದು ಆರೋಗ್ಯಕರ ರಾಜಕಾರಣ ಅಲ್ಲ : ನಂಜಯ್ಯನಮಠ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ಹಾಗೂ ರವೀಂದ್ರ ಕಲಬುರ್ಗಿ ಸುದ್ದಿಗೋಷ್ಠಿ ನಡೆಸಿದರು.

ಗುಳೇದಗುಡ್ಡ 17: ರಾಜಕಾರಣದಲ್ಲಿ ಯೋಜನೆ ಮಂಜೂರಿ ಒಬ್ಬರ ಅವಧಿಯಲ್ಲಾದರೆ, ಅಡಿಗಲ್ಲು ಮತ್ತೊಬ್ಬರ ಅವಧಿಯಲ್ಲಿ, ಉದ್ಘಾಟನೆ ಇನ್ನಾರದೋ ಅವಧಿಯಲ್ಲಾಗುವುದು ಸ್ವಾಭಾವಿಕ. ಆದರೆ ಅದು ನಮ್ಮಿಂದಲೇ ಆಗಿದೆ ಎನ್ನುವುದು ಆರೋಗ್ಯಕರ ರಾಜಕಾರಣ ಅಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಹೇಳಿದರು. 

ಅವರು ಗುರುವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 

ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು ಗುಳೇದಗುಡ್ಡಕ್ಕೆ ನಾವು ಬಸ್ ಡಿಪೋ ತಂದವರು ಎಂದು ಪ್ರತಿಕೆಯಲ್ಲಿ ಹೇಳಿಕೆ ನೀಡಿದ್ದಕ್ಕೆ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಡಿಪೋ ಎಚ್‌.ವೈ.ಮೇಟಿ ಅವರು ಶಾಸಕರಾಗಿದ್ದಾಗ, ರವೀಂದ್ರ ಕಲಬುರ್ಗಿ ನಿಗಮದ ಉಪಾಧ್ಯಕ್ಷರಾದ ಸಂದರ್ಭದಲ್ಲಿ ಇಲ್ಲಿನ ಪಕ್ಷಾತೀತ ಹಿರಿಯರ ಆಗ್ರಹದ ಮೇರೆಗೆ ಆಗಿದ್ದು. ಅದನ್ನು ಬಿಟ್ಟು ನಾವು ಎನ್ನುವುದು ಸರಿಯಲ್ಲ.  ಶೀಲವಂತ ಅವರ ಅವಧಿಯಲ್ಲಿ ರಸ್ತೆ ಮಂಜೂರಿ ಆಗಿತ್ತು. ನನ್ನ ಅವಧಿಯಲ್ಲಿ ರಸ್ತೆ ಅಯಿತು. ಅದು ಶೀಲವಂತ ಅವರ ಕಾರ್ಯ. ಮಲ್ಲಿಕಾರ್ಜುನ ಬನ್ನಿ ಅವರ ಅವಧಿಯಲ್ಲಿ ಕುಡಿಯೋ ನೀರಿನ ಕಾಮಗಾರಿ ಮಂಜೂರಿ ಆಗಿತ್ತು. ಅಡಳಿತಾತ್ಮಕ ಮಂಜೂರಿ ನಾನು ಪಡೆದೆ. ಕೆಲಸ ಮಂಜೂರಿ ಮಾಡಿಸಿದ್ದು ಮಲ್ಲಿಕಾರ್ಜುನ ಬನ್ನಿ ಅಲ್ಲವೇ. ಇದು ಟೀಕೆ ಅಲ್ಲ. ಶೀಲವಂತ ಅವರ ಗಮನಕ್ಕೆ ತರುತ್ತಿದ್ದೇನೆ. 

ಶೀಲವಂತ ಅವರು ಮಾಜಿ ಸಿ.ಎಂ., ಶಾಸಕ ಸಿದ್ದರಾಮಯ್ಯನವರನ್ನು ಅತಿಥಿ ಶಾಸಕ ಅಂತ ಅಂದಿದ್ದು ನೋವಿನ ಮಾತು. ಒಬ್ಬ ದಕ್ಷ, ಪಕ್ಷಾತೀತ, ಜನಪರ ನಾಯಕ ಸಿದ್ದರಾಮಯ್ಯನವರು. ಅವರಿಂದ ಮತಕ್ಷೇತ್ರದಲ್ಲಿ ಹಿಂದೆಂದೂ ಆಗದಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಅದನ್ನು ಶೀಲವಂತ ಅವರು ಸ್ವಾಗತಿಸಬೇಕು ಎಂದರು. 

ರವೀಂದ್ರ ಕಲಬುರ್ಗಿ ಮಾತನಾಡುತ್ತಾ 1997 ರಲ್ಲಿ ನಾನು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ ನಿಗಮದ ಉಪಾಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಗುಳೇದಗುಡ್ಡ ಪಟ್ಟಣಕ್ಕೆ ಬಸ್ ಡಿಪೋ ಮಂಜೂರಿಗೆ ಶ್ರಮಪಟ್ಟೆ. ಗುಳೇದಗುಡ್ಡ ಡಿಪೋ ಮಂಜೂರಿಗೆ ಯೋಗ್ಯ ಸ್ಥಳವಲ್ಲ ಎಂಬ ಗುಪ್ತವರದಿ ಇದ್ದರೂ ನಾನು ಗುಳೇದಗುಡ್ಡದಲ್ಲಿ ಶಿಕ್ಷಣ ಮುಗಿಸಿದ್ದರಿಂದ ಇಲ್ಲಿನ ಪಕ್ಷಾತೀತ ಹಿರಿಯರಾದ ರವೀಂದ್ರ ಪಟ್ಟಣಶೆಟ್ಟಿ, ರಾಜು ತಾಪಡಿಯಾ, ಚಂದ್ರಕಾಂತ ಶೇಖಾ, ಅಂದಿನ ಶಾಸಕ ಎಚ್‌.ವೈ. ಮೇಟಿ, ಲಕ್ಷ್ಮಣಸಾ ಕಾವಡೆ, ಎಂ.ಬಿ.ಹಂಗರಗಿ, ಎಸ್‌.ಜಿ.ನಂಜಯ್ಯನಮಠ, ಎಂ.ವಿ.ಬನ್ನಿ, ರಾಜಶೇಖರ ಶೀಲವಂತ ಇವರೆಲ್ಲರ ಒತ್ತಡದಿಂದ ಡಿಪೋ ಮಂಜೂರಿ ಮಾಡಿಸಿದೆ. ಅದರಲ್ಲಿ ಬಿಜೆಪಿಯವರ ಪರಿಶ್ರಮ ಅಷ್ಠೇ ಇಲ್ಲ. ಎಲ್ಲ ಪಕ್ಷಗಳ ಹಿರಿಯರದೂ ಇದೆ ಎಂದು  ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ರಫೀಕ್ ಕಲಬುರ್ಗಿ, ವಿನೋದ ಮದ್ದಾನಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷ ಮುಬಾರಕ ಮಂಗಳೂರ, ಸಲೀಂ ಮೋಮಿನ್, ಬಸವರಾಜ ಗಾಣಿಗೇರ, ರಾಜು ಸಂಗಮ, ಚಿದಾನಂದ ಕಾಟವಾ ಹಾಜರಿದ್ದರು. 


ಸುದ್ದಿ ಓದಿ