ಸಿಂಧಗಿ

ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಯೋಜನೆ ರೈತರಿಗೆ ಸಹಕಾರಿ: ಭೂಸನೂರ

ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಯೋಜನೆ ರೈತರಿಗೆ ಸಹಕಾರಿ: ಭೂಸನೂರ


ಸಿಂದಗಿ: ರೈತನ ಜಮೀನಿಗೆ ಸಂಬಂಧಿಸಿದ ಭೂದಾಖಲೆಗಳನ್ನು ‘ರೈತನ ಮನೆ ಬಾಗಿಲಿಗೆ’ ತಲುಪಿಸುವುದು ಒಂದು ಅತ್ಯುತ್ತಮ ಸೇವೆಯಾಗಿದೆ. ಜಮೀನಿನ ಈ ದಾಖಲೆಗಳು ರೈತನಿಗೆ ಸುರಕ್ಷಿತ ಭಾವನೆ ಮೂಡಿಸುತ್ತದೆ. ಈ ಪ್ರಕ್ರಿಯೆಯು ಅತ್ಯಮೂಲ್ಯ ಆಸ್ತಿಯನ್ನು ರಕ್ಷಿಸಲು ಸಹಕಾರಿಯಾಗುತ್ತದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು. 

ತಾಲೂಕಿನ ಕಕ್ಳಮೇಲಿ ಗ್ರಾಮ ಮತ್ತು ಕಕ್ಕಳಮೇಲಿ ತಾಂಡಾದದಲ್ಲಿ ಶನಿವಾರ ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಯೋಜನೆಗೆ ಅಡಿಯಲ್ಲಿ ರೈತರಿಗೆ ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. 

ಕಂದಾಯ ದಾಖಲೆಗಳಾದ ಆರ್‌ಟಿಸಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ವಿನೂತನ ಯೋಜನೆಯು ರೈತರು ಅನವಶ್ಯಕವಾಗಿ ದಾಖಲೆಗಳನ್ನು ಪಡೆಯಲು ವ್ಯಯಮಾಡುವ ಸಮಯ ಉಳಿಸುತ್ತದೆ. ಈ ಯೋಜನೆ ಅತ್ಯಂತ ಪ್ರಮುಖವಾಗಿದೆ. ಜಾತಿ ಮತ್ತು ಆದಾಯ ಪ್ರಮಾಣಪತ್ರಗಳು ಕೂಡ ಪ್ರಮುಖ ದಾಖಲೆಗಳಾಗಿದ್ದು, ಅದರ ಆಧಾರದ ಮೇಲೆ ನಾಗರಿಕರು ಶೈಕ್ಷಣಿಕ, ಉದ್ಯೋಗ ಮತ್ತು ಇತರೆ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಸಕಾಲದಲ್ಲಿ ಪಡೆಯಲು ಸಾಧ್ಯವಾಗುತ್ತದೆ ಎಂದರು. 

ನಮ್ಮ ಉದ್ದೇಶ ಸರ್ಕಾರದ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು ಎನ್ನುವುದು ನಮ್ಮ ಉದ್ದೇಶ. ಹಾಗಾಗಿಯೇ ಮನೆಬಾಗಿಲಿಗೆ ಪಿಂಚಣಿ, ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಮುಂತಾದ ಕಾರ್ಯಕ್ರಮಗಳನ್ನು ನೀಡಲಾಗಿತ್ತು. ಈಗ ಕಂದಾಯ ಇಲಾಖೆ ರೈತರಿಗೆ ದಾಖಲೆ ನೀಡುವುದರ ಮೂಲಕ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದು ಹೇಳಿದರು. 

ನಮ್ಮ ಬಿಜೆಪಿ ಸರ್ಕಾರವು ಕರ್ನಾಟಕದಾದ್ಯಂತ ರೈತರಿಗೆ ಸೇವೆ ಸಲ್ಲಿಸಲು ಮತ್ತು ರೈತರ ಸಬಲೀಕರಣಕ್ಕಾಗಿ ಇಂದಿನಿಂದ ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಐತಿಹಾಸಿಕ ಯೋಜನೆಯನ್ನು ಪ್ರಾರಂಭಿಸಿದೆ. ಕ್ಷೇತ್ರದಲ್ಲಿಯೂಪ್ರತಿ ಹಳ್ಳಿ ರೈತ ಕುಟುಂಬಗಳ ಮನೆಗೆ ತಲುಪಿಸಲಾಗುತ್ತದೆ. ಈ ಮೂಲಕ ರೈತ ಕುಟುಂಬಗಳಿಗೆ ಆಂದೋಲನ ರೀತಿಯಲ್ಲಿ ದಾಖಲೆಗಳನ್ನು ತಲುಪಿಸಲಾಗುತ್ತದೆ ಎಂದು ಹೇಳಿದರು. 

ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಯೋಜನೆಗೆ ಅತ್ಯಂತ ಉಪಯುಕ್ತ ಯೋಜನೆಯಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಶಾಸಕ ರಮೇಶ ಭೂಸನೂರ ಅವರ ನೇತೃತ್ವದಲ್ಲಿ ರೈತರಿಗೆ ಕಂದಾಯ ದಾಖಲೆಗಳನ್ನು ಮನೆ ಮನೆಗೆ ತೆರಳಿ ವಿತರಿಸಿದರು. 

ತಹಶೀಲ್ದಾರ ನಿಂಗಣ್ಣ ಬಿರಾದಾರ, ತಾಪಂ ಇಓ ಹೊಂಗಯ್ಯ ಕೆ., ಜಿಪಂ ಮಾಜಿ ಸದಸ್ಯ ಬಿಂದುರಾಯಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಸಂಜೀವಕುಮಾರ ಹಳ್ಳೆಪ್ಪಗೋಳ, ಉಮೇಶ ರಾಠೋಡ, ರವಿ ರಾಠೋಡ, ಸಿಡಿಪಿಓ ಬಸವರಾಜ ಜಿಗಳೂರ ಸೇರಿದಂತೆ ತಾಲೂಕಿ ಅಧಿಕಾರಿಗಳು, ರೈತರು, ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷ,  ಸದಸ್ಯರು, ರಾಜಕೀಯ ನಾಯಕರು, ರೈತ ಮಹಿಳೆಯರು ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ