ಕಾಗವಾಡ

ಮೂಲಭೂತ ಸೌಕರ್ಯಕ್ಕಾಗಿ ವಿದ್ಯಾನಗರ ನಿವಾಸಿಗಳಿಂದ ತಹಶೀಲ್ದಾರ ಕಚೇರಿ ಎದುರಿಗೆ ಪ್ರತಿಭಟನೆ..!!

ಮೂಲಭೂತ ಸೌಕರ್ಯಕ್ಕಾಗಿ ವಿದ್ಯಾನಗರ ನಿವಾಸಿಗಳಿಂದ ತಹಶೀಲ್ದಾರ ಕಚೇರಿ ಎದುರಿಗೆ ಪ್ರತಿಭಟನೆ..!!

ಕಾಗವಾಡ 09: ಪಟ್ಟಣದ ವಿದ್ಯಾನಗರಕ್ಕೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ, ರಸ್ತೆ, ಬೀದಿ ದೀಪಗಳ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ, ಅಲ್ಲಿಯ ನಿವಾಸಿಗಳು ತಹಶೀಲ್ದಾರ ಕಾರ್ಯಾಲಯದ ಎದುರಿಗೆ ಪ್ರತಿಭಟನೆ ನಡೆಸಿ, ಒತ್ತಾಯಿಸಿದ್ದಾರೆ. 

ಸೋಮವಾರ ದಿ. 09 ರಂದು ವಿದ್ಯಾನಗರದ ಮಹಿಳೆಯರು ಸೇರಿದಂತೆ ಅಲ್ಲಿಯ ನಿವಾಸಿಗಳು ಜಯ ಕರ್ನಾಟಕ ಸಂಘಟನೆಯ ಬೆಂಬಲದೊಂದಿಗೆ ತಹಶೀಲ್ದಾರ ಕಾರ್ಯಾಲಯದ ಎದುರು ಪ್ರತಿಭಟನೆ ಮಾಡಿ, ಸೂಕ್ತ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ. 

ಪಟ್ಟಣದಲ್ಲಿ ಸಧ್ಯೆ ನಡೆದಿರುವ ನಗರ ನೀರು ಸರಬರಾಜು ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದ ಕಾಲೋನಿಯ ರಸ್ತೆಗಳನ್ನು ಅಗೆದಿದ್ದರಿಂದ ಅವು ಹಾಳಾಗಿ, ಮಳೆ ಬಂದರೇ ಸಾಕು ಕೆಸರುಮಯವಾಗಿ ಸಾರ್ವಜನಿಕರು ನಿತ್ಯ ಓಡಾಡಲು ಪರದಾಡುವಂತಾಗಿದೆಯೆಂದು ಅಲ್ಲಿಯ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡರು. 

ಈ ವೇಳೆ ವಕೀಲರಾದ ರಾಹುಲ ಕಟಗೇರಿ ಮಾತನಾಡಿ, ಮಲ್ಲಿಕಾರ್ಜುನ ಹೈಸ್ಕೂಲದಿಂದ ಅಟಲಜೀ ಕೇಂದ್ರದ ವರೆಗೆ ಇರುವ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆಯು ಮಳೆಗಾಲದಲ್ಲಿ ಸಾಕಷ್ಟು ಹಾಳಾಗಿ, ಸಂಚರಿಸಲು ತುಂಬಾ ತೊಂದರೆ ಆಗುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯತಿಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ದೊರುಕುತ್ತಿಲ್ಲ. ಆದ ಕಾರಣ ಈಗ ಅನಿವಾರ್ಯವಾಗಿ ಪ್ರತಿಭಟನೆ ಮಾಡಿ, ನ್ಯಾಯ ಕೇಳಬೇಕಾಗಿದೆ. ರಸ್ತೆ ಕೆಸರುಮಯವಾಗಿದ್ದರಿಂದ ಅಲ್ಲಿಯ ನಿವಾಸಿಗಳು, ವಯೋವೃದ್ಧರು ಆ ರಸ್ತೆಯಲ್ಲಿ ಹಾದು ಹೋಗುವಾಗ ಬಿದ್ದು, ಆಸ್ಪತ್ರೆ ಸೇರುತ್ತಿದ್ದಾರೆ. ಚರಂಡಿಗಳಿಲ್ಲದೇ ನೀರು ನಿಂತಲ್ಲೇ ನಿಂತು ಸೊಳ್ಳೆಗಳ ಕಾಟದಿಂದ ಡೆಂಗ್ಯೂದಂತ ರೋಗಗಳಿಂದ ಅಲ್ಲಿಯ ನಿವಾಸಿಗಳು ಹೈರಾಣಾಗಿದ್ದೇವೆ. ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಯಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು. 

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ ರಾಜೇಶ ಬುರ್ಲಿ ಭೇಟಿ ನೀಡಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ ಅಧಿಕಾರಿಯನ್ನು ಸ್ಥಳಕ್ಕೆ ಕರೆಯಿಸಿ, ಪ್ರತಿಭಟನಾ ನಿರತ ವಿದ್ಯಾನಗರ ನಿವಾಸಿಗಳ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಸೂಚನೆ ನೀಡಿದರು. ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟ್ಟಿ ನೀಡಿ, ಪರೀಶೀಲನೆ ಮಾಡಿ, ಕೂಡಲೇ ನೀರು ಸರಬುರಾಜು ಮಾಡುವ ಪೈಪ್‌ಲೈನ್‌ಗಾಗಿ ಅಗೆದಿರುವ ರಸ್ತೆಯನ್ನು ರೀಪೇರಿ ಮಾಡುವ ಭರವಸೆ ನೀಡಿದ್ದರಿಂದ ಅಲ್ಲಿಯ ನಿವಾಸಿಗಳು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡರು. 

ಈ ವೇಳೆ ರಾಹುಲ ಕಟಗೇರಿ, ಭರತ ಮೋಳೆ, ಅರುಣ ಜೋಶಿ, ಎಂ.ಬಿ. ಉದಗಾಂವೆ, ಆಕಾಶ ಮಿಠಾರೆ, ಡಾ. ಪವನ ಮಾಲಗಾಂವೆ, ಈರಗೌಡಾ ಪಾಟೀಲ, ಪ್ರಕಾಶ ಐನಾಪೂರೆ, ಸಾಜೀದ ಇನಾಮದಾರ, ಅಶ್ಪಕ್ ಮಕಾನಾದಾರ, ಅರುಣ ಖಾಡೆ, ಪ್ರಭಾಕರ ರೂಗೆ, ಅಶೋಕ ಮೋರೆ, ದೀಪಕ ಕರವ, ಸಚೀನ ಚಿಪ್ಪರಗಿ ಸೇರಿದಂತೆ ವಿದ್ಯಾನಗರದ ನಿವಾಸಿಗಳು, ಮಹಿಳೆಯರು ಉಪಸ್ಥಿತರಿದ್ದರು. 


ಸುದ್ದಿ ಓದಿ