ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಲು ಮನವಿ
ಕಾಗವಾಡ 21: ಕಾಗವಾಡದ ಶಿವಾನಂದ ಮಹಾವಿದ್ಯಾಲಯ ಸೇರಿದಂತೆ ತಾಲೂಕಿನ ಇತರ ವಿದ್ಯಾಲಯಕ್ಕೆ ವಿದ್ಯಾರ್ಥಿಗಳಿಗೆ ಹೋಗಿಬರಲು ಬಸ್ಗಳ ಕೊರತೆಯಾಗುತ್ತಿದ್ದು ವಿದ್ಯಾರ್ಥಿಗಳನ್ನು ಬಸ್ ಚಾಲಕರು ತೆಗೆದುಕೊಳ್ಳದೆ ಹಾಗೆ ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ 1700 ವಿದ್ಯಾರ್ಥಿಗಳು ಓದುತ್ತಾರೆ. ಪ್ರತಿದಿನ ಬೆಳಗ್ಗೆ ಉಗಾರ್, ಐನಾಪುರ್, ಕುಡಚಿ, ಮೊಳವಾಡ, ಕುಸನಾಳ, ಶೇಡಬಾಳ ಈ ಗ್ರಾಮಗಳಿಂದ ಶೇಕಡಾ 50ರಷ್ಟು ವಿದ್ಯಾರ್ಥಿಗಳು ಇದೇ ಮಾರ್ಗದಿಂದ ಪ್ರಯಾಣ ಬೆಳಸುತ್ತಾರೆ.
ಆದರೆ ಜಮಖಂಡಿ, ಬಾಗಲಕೋಟ್, ರಾಯಬಾಗ್ ಡೀಪೊಗಳಿಂದ ಸಂಚರಿಸುವ ವಾಹನಗಳು ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ಮಹಾವಿದ್ಯಾಲಯ ತಲಪಲು ಕಷ್ಟವಾಗುತ್ತಿದೆ. ಪ್ರತಿದಿನ ವಿದ್ಯಾಲಯದಲ್ಲಿ ತಡವಾಗಿ ಹೋಗುವುದರಿಂದ ಅಭ್ಯಾಸ ಮಾಡಲು ಬಹಳಷ್ಟು ಕಷ್ಟ ಆಗುತ್ತದೆ.
ಮಹಾವಿದ್ಯಾಲಯದ ಪಿಯುಸಿ ವಿಭಾಗದಲ್ಲಿ 900 ಮತ್ತು ಪದವಿ ವಿಭಾಗದಲ್ಲಿ 800 ವಿದ್ಯಾರ್ಥಿಗಳು ಒದುತ್ತಾರೆ. ಸದ್ಯಕ್ಕೆ ಪೂರ್ವ ಪರೀಕ್ಷೆ ಪ್ರಾರಂಭವಿದ್ದು ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಪ್ರಾರಂಭವಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ
ಮೊಳವಾಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಇವರಿಗೆ ಮೊಳವಾಡ, ಕುಸನಾಳ, ಉಗಾರ್ ಸೇರಿದಂತೆ ಇಲ್ಲಿಯ ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಸಂಚರಿಸಲು ಬಸ್ಸುಗಳ ವ್ಯವಸ್ಥೆ ಮಾಡಬೇಕೆಂದು ಕೇಳಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಕೆಎಸ್ಆರಟಿಸಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಂಚಾರದ ತೊಂದರೆ ವರಿಷ್ಠಾಧಿಕಾರಿಗಳು ಗಮನದಲ್ಲಿ ತೆಗೆದುಕೊಂಡು ಸಹಕಾರ ನೀಡಬೇಕೆಂದು ಕೇಳಿಕೊಂಡಿದ್ದಾರೆ.