ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಆಗ್ರಹ
ಶಿಗ್ಗಾವಿ 20: ಹಾವೇರಿ ಜಿಲ್ಲೆಯಲ್ಲಿ ಅತಿಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು, ಈ ಸಾರಿ ಉತ್ತಮ ಬೆಲೆಯಿಲ್ಲದೇ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ರೈತ ಸೇನಾ ಕರ್ನಾಟಕ ಸಂಘದ ನೇತೃತ್ವದಲ್ಲಿ ಹಾವೇರಿಯ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.
ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವಿರೇಶ ಸೋಬರದಮಠ ಸ್ವಾಮಿಗಳು ಮಾತನಾಡಿ ಗೋವಿನಜೋಳದ ಖರೀದಿ ಕೇಂದ್ರ ಹಾಗೂ ಬೆಂಬಲ ಬೆಲೆಯನ್ನು ನಿಗದಿಯನ್ನು ಮಾಡುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಹಲವಾರು ಬಾರಿ ಮನವಿ ಮಾಡಲಾಗಿದೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸೇನಾ ಕರ್ನಾಟಕದ ಜಿಲ್ಲಾಧ್ಯಕ್ಷ ಸಿದ್ದಲಿಂಗೇಶ(ವರುಣಗೌಡ) ಎಂ. ಪಾಟೀಲ ಮಾತನಾಡಿ ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಐದಾರು ಬಾರಿ ಮನವಿ ಸಲ್ಲಿಸಲಾಗಿದೆ. ಹೀಗಾಗಿ ರೈತರು ಸಿಕ್ಕ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಬೆಳೆ ಬೆಳೆಯಲು ಮಾಡಿದ ಖರ್ಚು ರೈತರಿಗೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದು, ರೈತರ ಸಮಸ್ಯೆ ಪರಿಹಾರಕ್ಕೆ ಒಬ್ಬರ ಮೇಲೋಬ್ಬರ ಹಾಕದೇ ಕೂಡಲೇ ಜಿಲ್ಲೆಯ ಸಚಿವರು, ಶಾಸಕರು, ಸಂಸದರು ಈ ಕುರಿತು ಸರ್ಕಾರಗಳ ಮೇಲೆ ಒತ್ತಡ ತಂದು ರೈತರ ನೆರವಿಗೆ ಧಾವಿಸಬೇಕು. ಅದು ಬಿಟ್ಟು ಕೇಂದ್ರ ಸರ್ಕಾರ ಮೆಕ್ಕೆಜೋಳವನ್ನು ಪಿಡಿಎಸ್ನಿಂದ ಹೊರಗಿಟ್ಟಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಾ ಕುಳಿತುಕೊಳ್ಳಬಾರದು. ರಾಜ್ಯ ಸರ್ಕಾರದ ಹಣದಲ್ಲಿಯೇ ಮೆಕ್ಕೆಜೋಳ ಖರೀದಿಸಿ ಇದನ್ನು ಆಹಾರವಾಗಿ ಬಳಸುವ ಕಡೆಗಳಲ್ಲಿ ಪೂರೈಸಬೇಕು ಎಂದು ಆಗ್ರಹಿಸಿದರು.
ಈ ಕೂಡಲೇ ಸರ್ಕಾರ ನಮ್ಮ ಮನವಿಗೆ ಸ್ಪಂದನೆ ನೀಡಿ ರೈತರ ಕಣ್ಣೀರು ಒರೆಸುವ ಕಾರ್ಯಕ್ಕೆ ಮುಂದಾಗದೇ ಇದ್ದರೇ ಮುಂದೆ ಹೆದ್ದಾರಿ ತಡೆಯಂತಹ ಚಳುವಳಿಗೆ ಮುಂದಾಗಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ರೈತ ಮುಖಂಡ ಪಿ.ಬಿ. ದುಂಡಿಗೌಡ್ರ, ಎಫ್.ಆರ್ ಕೊಂಡಾಯಿ, ರಾಮಜಿ ಸಿಂಧೆ, ಫಕ್ಕೀರಪ್ಪ ಬಿಸೆಟ್ಟಿ, ಸಿದ್ದಯ್ಯ ಹಿರೇಮಠ, ಶಿವಾನಂದ ಹೊಸಮನಿ, ಮಲ್ಲಣ್ಣ ಆಲೇಕರ, ಫಕ್ಕೀರಪ್ಪ ವಾಲ್ಮೀಕಿ, ಬಸವರಾಜ ದೊಡ್ಡಗೌಡ್ರ, ಶಂಕರಗೌಡ ಸಣ್ಣಗೌಡ್ರ, ಕೊಟೇಪ್ಪಾ ಸಂಜಿವಣ್ಣನವರ, ಮಹ್ಮದ ಮುಲ್ಲಾ, ಆರ್.ಡಿ. ಗಿರೀಶ, ಈರನಗೌಡ ಪಾಟೀಲ, ಸೋಮಶೇಖರ ಅಣ್ಣಿಗೇರಿ, ಎಸ್.ಎಸ್. ಹುರಳಿ, ನಾಗನಗೌಡ ಮರಿಗೌಡ್ರ ಸೇರಿದಂತೆ ಹಲವಾರು ಗ್ರಾದಿಂದ ಆಗಮಿಸಿದ ರೈತ ಸಮೂಹ ಪ್ರತಿಭಟನೆಯಲ್ಲಿದ್ದರು.