ಪಂಪಸೆಟ್ಗಳಿಗೆ 7 ಗಂಟೆ ನಿರಂತರ ವಿದ್ಯುತ್ ಒದಗಿಸಲು ಮನವಿ
ಶೇಡಬಾಳ 17: ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಯಾತ ನೀರಾವರಿ ಸಂಘಗಳ ವಿದ್ಯುತ್ ಪಂಪಸೆಟ್ಗಳಿಗೆ ಹಗಲು ಹೊತ್ತಿನಲ್ಲಿ 7 ಗಂಟೆ ನಿರಂತರ ವಿದ್ಯುತ್ ನೀಡಬೇಕು ಹಾಗೂ ರಾತ್ರಿ ಹೊತ್ತಿನಲ್ಲಿ ಸಿರಿಯಲ್ ವಿದ್ಯುತ್ ನೀಡಬೇಕು ಎಂದು ಉಗಾರ ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ರೈತರು ಮನವಿ ಮಾಡಿಕೊಂಡರು.
ಸೋಮವಾರ ದಿ. 17 ರಂದು ಮಾಜಿ ಶಾಸಕ ರಾಜು ಕಾಗೆ ಹಾಗೂ ರೈತ ಮುಖಂಡ ರಾಜಾರಾಮ ಗಡಗೆಯವರ ನೇತೃತ್ವದಲ್ಲಿ ಯಾತ ನೀರಾವರಿ ಸಂಘದ ನೂರಾರು ರೈತರು ಮಾಜಿ ಶಾಸಕ ರಾಜು ಕಾಗೆ ನೇತೃತ್ವದಲ್ಲಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿ
ಉಗಾರ ಖುರ್ದ ಹೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಗೀತಾ ಕಡಲಾಸ್ಕರ, ರಾಜು ರಾಠೋಡ ಅವರಿಗೆ ಮನವಿ ಮಾಡಿಕೊಂಡರು.
ಮನವಿ ಅರ್ಪಿಸಿ ಮಾಜಿ ಶಾಸಕ ರಾಜು ಕಾಗೆ ಹಾಗೂ ರೈತ ಮುಖಂಡ ರಾಜಾರಾಮ ಗಡಗೆ ಮಾತನಾಡುತ್ತಾ ಇನ್ನು ಬೇಸಿಗೆ ಕಾಲ ಪ್ರಾರಂಭವಾಗಿಲ್ಲ. ಈಗಾಗಲೇ ಹೆಸ್ಕಾಂ ಇಲಾಖೆಯವರು ಯಾತ ನೀರಾವರಿ ಸಂಘದ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ನೀಡಲು ಮೀನಾಮೇಷ ಎಸಗುತ್ತಿದ್ದಾರೆ. ಇದರಿಂದಾಗಿ ರೈತರಿಗೆ ಸಾಕಷ್ಟು ತೊಂದರೆಗಳಾಗುತ್ತಿವೆ. ಈ ಭಾಗದ ರೈತರು ಸಾಲ ಸೂಲ ಮಾಡಿ ತಮ್ಮ ಜಮೀನುಗಳನ್ನು ಬ್ಯಾಂಕಿನವರಿಗೆ ಅಡವಿಟ್ಟು ಯಾತ ನೀರಾವರಿ ಸಂಘಗಳನ್ನು ಸ್ಥಾಪಿಸಿ ಆ ಸಂಘಗಳ ಮೂಲಕ ತಮ್ಮ ಜಮೀನುಗಳಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಂಡಿದ್ದಾರೆ. ಅಲ್ಲಿ ಬೆಳೆದ ಬೆಳೆಗಳಿಂದ ತಮ್ಮ ಉಪಜೀವನವನ್ನು ಸಾಗಿಸುತ್ತಿದ್ದಾರೆ. ಸಾವಿರಾರು ಕುಟುಂಬಗಳು ಈ ಜಮೀನುಗಳನ್ನೇ ಅವಲಂಬಿಸಿರುವದರಿಂದ ಹೆಸ್ಕಾಂ ಇಲಾಖೆಯವರು ನಿರಂತರ ವಿದ್ಯುತ್ ನೀಡಬೇಕಾಗಿರುವುದು ಅವರ ಆದ್ಯ ಕರ್ತವ್ಯವಾಗಿದೆ. ಕಾರಣ ಬೇಸಿಗೆ ದಿನಮಾನಗಳಲ್ಲಿ ವಿದ್ಯುತ್ ಪಂಪಸೆಟ್ಗಳಿಗೆ ಹಗಲು ಹೊತ್ತಿನಲ್ಲಿ 7 ಗಂಟೆಗಳ ಕಾಲ ಹಾಗೂ ರಾತ್ರಿ ಸಿರಿಯಲ್ ವಿದ್ಯುತ್ ನೀಡಬೇಕು. ಒಂದು ವೇಳೆ ನೀಡದೇ ಹೋದಲ್ಲಿ ರೈತರು ರಸ್ತೆಗೀಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಮಯದಲ್ಲಿ ಮಾಜಿ ಶಾಸಕ ರಾಜು ಕಾಗೆ, ರಾಜಾರಾಮ ಗಡಗೆ, ಎಸ್.ಎಸ್.ಗಡಗೆ, ಶಂಕರ ವಾಘಮೋಡೆ, ಬಾಳಾಸಾಬ ವಿಸಾಪೂರೆ, ವಸಂತ ಖೋತ ಸೇರಿದಂತೆ ಅನೇಕ ಯಾತ ನೀರಾವರಿ ಸಂಘಗಳ ಸದಸ್ಯರು, ರೈತರು ಇದ್ದರು.