ಬೈಲಹೊಂಗಲ

ವಿದ್ಯಾರ್ಥಿಗಳಿಗೆ ತ್ವರಿತ ಬಸ್ ಪಾಸ್ ವಿತರಿಸಲು ಒತ್ತಾಯಿಸಿ ಮನವಿ

ವಿದ್ಯಾರ್ಥಿಗಳಿಗೆ ತ್ವರಿತ ಬಸ್ ಪಾಸ್ ವಿತರಿಸಲು ಒತ್ತಾಯಿಸಿ ಮನವಿ

ಬೈಲಹೊಂಗಲ 27: ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳಿಗೆ ತ್ವರಿತಗತಿಯಲ್ಲಿ ಬಸ್ ಪಾಸ್ ವಿತರಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಹಾಗೂ ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕದಿಂದ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. 

ರಾಯಣ್ಣ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ರಾಜು ಸೊಗಲ, ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ ಮನವಿ ನೀಡಿ ಮಾತನಾಡಿ ರಾಜ್ಯ ಸರಕಾರ ಶಾಲೆಗಳನ್ನು ಪುನರ ಆರಂಭಿಸಿರುವುದು ಹರ್ಷದಾಯಕವಾಗಿದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲ ಆಗಿದೆ. ಆದರೆ ಗ್ರಾಮೀಣ ವಿದ್ಯಾರ್ಥಿಗಳು ಬಸ್ ಪಾಸ್ ಇಲ್ಲದೆ ಶಾಲೆಗಳಿಗೆ ಸರಿಯಾಗಿ ತೆರಳಲು ಅನಾನೂಕೂಲವಾಗಿದೆ. ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳು ಪ್ರತಿದಿನ ದುಡ್ಡು ಕೊಟ್ಟು ಟಿಕೇಟ್ ಪಡೆದು ಶಾಲೆಗಳಿಗೆ ಬರುವುದು ಕಷ್ಟದಾಯಕವಾಗಿದೆ. ಬಸ್ ಪಾಸ್ ವಿತರಣೆ ಮಾಡುವವರೆಗೆ ಶಾಲಾ ದಾಖಲಾತಿ ರಶೀದಿ ತೋರಿಸುವ ವಿದ್ಯಾರ್ಥಿಗಳಿಗೆ ಬಸ್ಸಿನಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಡಬೇಕು. ತ್ವರಿತಗತಿಯಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಮಾಡಿ ನೆರವಾಗಬೇಕು ಎಂದರು.  

ವಕೀಲ ಬಿ.ಎಲ್‌.ಕುಮಾರನಾಯ್ಕ, ಶಿಕ್ಷಕ ಚಂದ್ರಯ್ಯ ಯರಗಟ್ಟಿಮಠ, ಜಯ ಕರ್ನಾಟಕ ಸಂಘಟನೆ ಮುಖಂಡ ಶ್ರೀಶೈಲ ಹಂಪಿಹೊಳಿ, ಮಡಿವಾಳಪ್ಪ ಹೋಟಿ, ನಿವೃತ್ತ ಯೋಧರಾದ ಆನಂದ ತೋಟಗಿ, ಈರ​‍್ಪ ಕಾಡೇಶನವರ, ಮಂಜುನಾಥ ಜ್ಯೋತಿ, ರವಿ ವನ್ನೂರ, ಬಸವರಾಜ ಕಟ್ಟಿಮನಿ, ಈರಣ್ಣಾ ಮೇಲಿಕಟ್ಟಿ ಇದ್ದರು. ಉಪವಿಭಾಗಾಧಿಕಾರಿ ಕಚೇರಿಯ ಶೇಖರ ಹಲಸಗಿ ಮನವಿ ಸ್ವೀಕರಿಸಿದರು.  

ವಿದ್ಯಾರ್ಥಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಘಟಕ ವ್ಯವಸ್ಥಾಪಕರೊಂದಿಗೆ ಮಾತನಾಡಿ ಬಸ್ ಪಾಸ್ ಪೂರೈಸಲಾಗುವುದು.  

ಶಶಿಧರ ಬಗಲಿ, ಉಪವಿಭಾಗಾಧಿಕಾರಿ, ಬೈಲಹೊಂಗಲ 


ಸುದ್ದಿ ಓದಿ