ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅವೈಜ್ಞಾನಿಕ ಹಂಪ್ಸ್‌ಗಳನ್ನು ತೆಗೆದು ಹಾಕಿ; ವಾಹನ ಸವಾರರ ಸುರಕ್ಷತೆಗೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ 02: ರಸ್ತೆ ಸಂಚಾರ ಮಾಡುವ ವಾಹನ ಸವಾರರಿಗೆ ಸುರಕ್ಷಿತ ಸಂಚಾರದ ಭರವಸೆ ಮೂಡಿಸುವುದು ಸಂಬಂಧಿಸಿದ ಇಲಾಖೆಗಳ ಕರ್ತವ್ಯ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಜಿಲ್ಲೆಯಲ್ಲಿ ಬರುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅವೈಜ್ಞಾನಿಕ ಹಂಪ್ಸ್‌ಗಳನ್ನು ತೆಗೆದುಹಾಕಬೇಕು. ಈ ಕುರಿತು ಜಿಲ್ಲೆಯಲ್ಲಿ ರಸ್ತೆ ಸಮೀಕ್ಷೆ ಮಾಡುವಂತೆ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಮತ್ತು ಜಿಲ್ಲಾ ರಸ್ತೆ ಸಾರಿಗೆ ಸಮಿತಿ ಸಭೆಗಳ ಅಧ್ಯಕ್ಷತೆವಹಿಸಿ, ಮಾತನಾಡಿದರು.
ರಸ್ತೆಗಳಲ್ಲಿ ಸಂಚಾರ ಮಾಡುವುದು ಕಷ್ಟವಾಗಿದೆ. ಅನುಮತಿ ಇಲ್ಲದೇ ಅನೇಕರು ರಸ್ತೆಗಳ ಮೇಲೆ ಹಂಪ್ಸ್ ಮಾಡುತ್ತಾರೆ. ಯಾವುದೇ ಮುನ್ಸೂಚನೆ ಇಲ್ಲದೇ ಹಂಪ್ಸ್ ಹಾಕುವದರಿಂದ ಅಪಘಾತಗಳು ಹೆಚ್ಚಾಗಿ, ಸವಾರರ ಮರಣಗಳು ಹೆಚ್ಚುತ್ತವೆ. ಈ ಕುರಿತು ರಸ್ತೆ ಸಮೀಕ್ಷೆ ಮಾಡಿ, ಅನುಮತಿಯಿಲ್ಲದ ಹಂಪ್ಸ್‌ಗಳನ್ನು ತೆಗೆದು ಹಾಕಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಳೆದ ಸಭೆಯಲ್ಲಿ ಚರ್ಚಿಸಿದಂತೆ, ಹೆಚ್ಚು ಜನಸಂದಣಿ ಇರುವ ಮತ್ತು ಪ್ರಮುಖ ಸಂಚಾರ ನಿಲ್ದಾಣಗಳ ಸಮೀಪದಲ್ಲಿ ಮುಖ್ಯವಾಗಿ ಹುಬ್ಬಳ್ಳಿಯ ಐದು ಸ್ಥಳಗಳಲ್ಲಿ ಆಟೋ ನಿಲ್ದಾಣಗಳನ್ನು ಸ್ಥಾಪಿಸಲು ಸೂಚಿಸಲಾಗಿತ್ತು. ಕೆಲವು ಇನ್ನೂ ನಿರ್ಮಾಣ ಹಂತದಲ್ಲಿವೆ. ಅದಕ್ಕೆ ಬೇಗ ಕಾಮಗಾರಿ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅವಳಿನಗರದಲ್ಲಿ ಅನಧಿಕೃತ ಆಟೋಗಳ ಓಡಾಟ ಹೆಚ್ಚಾಗಿದೆ, ಸಾರ್ವಜನಿಕರಿಂದ ಅನಗತ್ಯವಾಗಿ ಹೆಚ್ಚುವರಿ ಹಣ ವಸೂಲು ಮಾಡುತ್ತಿದ್ದಾರೆ ಎಂದು ಸಾರ್ವಜನಿಕ ದೂರುಗಳು ಬರುತ್ತಿವೆ. ಸಾರಿಗೆ ಹಾಗೂ ಪೊಲೀಸ ಅಧಿಕಾರಿಗಳು ಈ ಕುರಿತು ಪರೀಶೀಲಿಸಿ, ತುರ್ತು ಕ್ರಮವಹಿಸಬೇಕು. ಪರಮೀಟ್ ಇಲ್ಲದೇ ಆಟೋ ಓಡಿಸುತ್ತಿದ್ದರೆ, ಅಂತಹ ವಾಹನ ಜಪ್ತಿ ಮಾಡಿ, ಮಾಲೀಕ ಹಾಗೂ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಫ್ರೀ ಪೇಡ್ ಆಟೋ ವ್ಯವಸ್ಥೆ ಮಾಡಲು ಕ್ರಮವಹಿಸಿ, ಜನರಲ್ಲಿ ಸಂಚಾರ ಸುರಕ್ಷತೆ ಹಾಗೂ ಸುರಕ್ಷಿತ ಪ್ರಯಾಣದ ಬಗ್ಗೆ ಅರಿವು ಮೂಡಿಸಿ. ಐಇಸಿ ಚಟುವಟಿಕೆಗಳಿಗೆ ಬರುವ ಅನುದಾನವನ್ನು ಸಮರ್ಕವಾಗಿ, ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಬಳಕೆ ಮಾಡಲು ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆ ಪಡೆಯುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸರಿಯಾದ ದಾಖಲೆ ಹೊಂದಿರದ ಮತ್ತು ಪರಮೀಟ್ ಇಲ್ಲದೇ ಸಂಚರಿಸುವ ಆಟೋ ಹಾಗೂ ಇತರ ವಾಹನಗಳನ್ನು ಸೀಜ್ ಮಾಡಲು ಪೊಲೀಸ್ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ತಪಾಸಣಾ ಅಭಿಯಾನ ಮಾಡುವಂತೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ನಿರ್ದೇಶಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಮಹಾನಗರ ಉಪ ಪೊಲೀಸ ಆಯುಕ್ತ ರವೀಶ ಸಿ.ಆರ್. ಸಂಚಾರ ನಿಯಮಗಳ ಮತ್ತು ಸಾರಿಗೆ ನಿಯಂತ್ರಣ, ರಸ್ತೆ ಅಭಿವೃದ್ಧಿ, ಸೇತುವೆ ಅಗಲೀಕರಣ ಕುರಿತು ಮಾತನಾಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ ಅವರು ಮಾತನಾಡಿ, ಏಪ್ರಿಲ್ 1, 2023 ರಿಂದ ಮಾರ್ಚ್ 31, 2024 ರವರೆಗೆ ಸಂಚಾರ ಹಾಗೂ ಸಾರಿಗೆ ನಿಯಮ ಉಲ್ಲಂಘಿಸಿದ ಧಾರವಾಡದಲ್ಲಿ 3,444 ಪ್ರಕರಣಗಳನ್ನು ದಾಖಲಿಸಿ, ರೂ.20,76,0272 ಗಳು ಮತ್ತು ಹುಬ್ಬಳ್ಳಿಯಲ್ಲಿ 3,497 ಪ್ರಕರಣಗಳನ್ನು ದಾಖಲಿಸಿ, 23,70,5,832 ರೂ.ಗಳು ಸೇರಿ ಒಟ್ಟು 6,941 ಪ್ರಕರಣ ದಾಖಲಿಸಿ, ರೂ.44,46,61,104 ರೂಗಳನ್ನು ವಸೂಲು ಮಾಡಲಾಗಿದೆ. ಅವಳಿನಗರ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದ ಆಟೋಗಳಿಗೆ ಸಂಬಂಧಿಸಿದಂತೆ ಒಟ್ಟು 1,681 ಪ್ರಕರಣಗಳನ್ನು ದಾಖಲಿಸಿ, ರೂ.48,08,832 ಗಳ ದಂಡ ವಸೂಲು ಮಾಡಲಾಗಿದೆ. ಜಿಲ್ಲಾಧಿಕಾರಿಗಳು ನೀಡುವ ಎಲ್ಲ ನಿರ್ದೇಶನಗಳನ್ನು ಪಾಲಿಸುವದಾಗಿ ಅವರು ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಸಾರಿಗೆ ಪ್ರಾಧಿಕಾರದ ಸಭೆಯನ್ನು ಭೀಮನಗೌಡ ಪಾಟೀಲ ಅವರು ಮತ್ತು ಜಿಲ್ಲಾ ರಸ್ತೆ ಸುರಕ್ಷತಾ ಸಭೆಯನ್ನು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪ್ರಶಾಂತ ಪಿ.ಕೆ. ಅವರು ನಿರ್ವಹಿಸಿದರು. ಪರುಶರಾಮ ರಾಠೋಡ ವಂದಿಸಿದರು.
ಸಭೆಯಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಮಹಾನಗರಪಾಲಿಕೆ, ಸ್ಮಾರ್ಟ ಸಿಟಿ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಅಬಕಾರಿ, ಅಳತೆ ಮತ್ತು ತೂಕ ಮಾಪನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಸಂದರ್ಭದಲ್ಲಿ ರಸ್ತೆ ಸುರಕ್ಷತೆ ಕುರಿತ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.