ಎಸ್.ಜಿ. ಬಾಳೇಕುಂದ್ರಿ, ಸರ್. ಎಂ. ವಿಶ್ವೇಶ್ವರಯ್ಯನವರ ಸ್ಮರಣೆ
ಧಾರವಾಡ 17: ಸರ್. ಎಂ. ವಿಶ್ವೇಶ್ವರಯ್ಯ ಹಾಗೂ ದಿ. ಎಸ್.ಜಿ. ಬಾಳೇಕುಂದ್ರಿ ಇಬ್ಬರೂ ಮಹಾನುಭಾವರು ಆಧುನಿಕ ಸಮೃದ್ಧ ಕರ್ನಾಟಕ ಕಟ್ಟುವ ಕನಸು ಕಂಡವರು ಎಂದು ಲೋಕೋಪಯೋಗಿ ಇಲಾಖೆಯ ವಿಶ್ರಾಂತ ಮುಖ್ಯ ಅಭಿಯಂತರರಾದ ಕೃಷ್ಣಾಜಿ ಚವ್ಹಾಣ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಎಸ್.ಜಿ. ಬಾಳೇಕುಂದ್ರಿ ದತ್ತಿ ಅಂಗವಾಗಿ ಆಯೋಜಿಸಿದ್ದ ಕೀರ್ತಿಶೇಷ ಎಸ್.ಜಿ. ಬಾಳೇಕುಂದ್ರಿ ಮತ್ತು ಸರ್. ಎಂ. ವಿಶ್ವೇಶ್ವರಯ್ಯನವರ ಸ್ಮರಣೆ ಹಾಗೂ ಇಂಜನೀಐರರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಸರ್. ಎಂ. ವಿಶ್ವೇಶ್ವರಯ್ಯ ಹಾಗೂ ದಿ. ಎಸ್.ಜಿ. ಬಾಳೇಕುಂದ್ರಿ ಇಬ್ಬರೂ ನೀರಾವರಿ ಕ್ಷೇತ್ರದ ದಿಗ್ಗಜರು. ಇವರೀರ್ವರು ನೀರಾವರಿ ಆಣೆಕಟ್ಟು ನಿರ್ಮಾಣ ಹಾಗೂ ವಿನ್ಯಾಸದ ಅವಿಷ್ಕಾರ ಅದ್ಭುತವಾದುದು. ದಿ. ಎಸ್. ಜಿ. ಬಾಳೇಕುಂದ್ರಿ ಅವರು ಕೃಷ್ಣೆ, ಮಲಪ್ರಭ ಹಾಗೂ ಘಟಪ್ರಭಾ ನೀರಾವರಿ ಯೋಜನೆ ನಿರ್ಮಾಣದ ಮುಖ್ಯ ರೂವಾರಿಗಳು. ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ಸವಾಲಿನ ಪ್ರಶ್ನೆಯಾಗಿದ್ದ ಸಂದರ್ಭದಲ್ಲಿ ದಿ. ಎಸ್.ಜಿ. ಬಾಳೇಕುಂದ್ರಿ ಸರಕಾರದ ತಾಂತ್ರಿಕ ಸಲಹಾ ಸಮಿತಿ ಅನುಮತಿ ಪಡೆದು ಎಡದಂಡೆ ಕಾಲುವೆ ನಿರ್ಮಿಸಿ ರಾಮದುರ್ಗ ಹಾಗೂ ಬದಾಮಿ ತಾಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದರು ಮತ್ತು ಬರಗಾಲದ ಬವಣೆಯಿಂದ ಆ ಪ್ರದೇಶವನ್ನು ಮುಕ್ತಗೊಳಿಸಿದರು. ಇವರ ಸಾಧನೆ ಈಗಿನ ಎಲ್ಲಾ ಅಭಿಯಂತರ ಸಾಧನೆಗೆ ಸ್ಫೂರ್ತಿಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡದ ವಾಲ್ಮಿ ಸಂಸ್ಥೆಯ ಅಧೀಕ್ಷಕ ಅಭಿಯಂತರರಾದ ಬಸವರಾಜ ಬಂಡಿವಡ್ಡರ್ ಮಾತನಾಡಿ, ಸರ್. ಎಂ. ವಿಶ್ವೇಶ್ವರಯ್ಯ ಹಾಗೂ ಎಸ್.ಜಿ. ಬಾಳೇಕುಂದ್ರಿ ಇಬ್ಬರೂ ನಡೆದಾಡುವ ದೇವರಂತೆ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಅವರ ಪಾತ್ರ ಅನನ್ಯ. ಸುಸ್ಥಿರ ಅಭಿವೃದ್ಧಿಗೆ ಎಲ್ಲರಿಗೂ ಮೂಲಭೂತ ಸೌಲಭ್ಯಗಳಾದ ಶುದ್ಧ ನೀರು, ಗಾಳಿ ಹಾಗೂ ಶುದ್ಧಮಣ್ಣು ಅಗತ್ಯವಾಗಿದ್ದು, ಈ ಮೂರು ಸಂಗತಿ ನಿಸರ್ಗದ ತತ್ವದ ಅನುಗುಣವಾಗಿ ಬಳಕೆಯಾಗಬೇಕು. ನೀರನ್ನು ಹಿತಮಿತವಾಗಿ ವೈಜ್ಞಾನಿಕ ಬಳಕೆಯಾಗಬೇಕು. ಮಣ್ಣು ಸವಕಳಿ ಆಗದಂತೆ, ನಿಸ್ಸಾರವಾಗದಂತೆ ನೋಡಿಕೊಳ್ಳಬೇಕು. 1 ಇಂಚು ಮಣ್ಣು ರಚನೆಯಾಗಲು 700 ವರ್ಷ ಬೇಕು. ಮುಂದಿನ ಪೀಳಿಗೆಗೆ ಇವುಗಳನ್ನು ಸುಸ್ಥಿರ ಸ್ಥಿತಿಯಲ್ಲಿರಸಬೇಕೆಂದು ಹೇಳಿದರು.
ಸಂಘದ ಪರವಾಗಿ ಇಂಜನೀಯರುಗಳಾದ ಕೃಷ್ಣಾಜಿ ಚವ್ಹಾಣ, ಬಸವರಾಜ ಬಂಡಿವಡ್ಡರ ಹಾಗೂ ಕ.ವಿ.ವ. ಸಂಘದ ಇಂಜನೀಯರ ಶ್ರೀಶೈಲಗೌಡ ಕಮತರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು.