ಶ್ರಾವಣ ಮಾಸದ ಪ್ರಯುಕ್ತ ಐರಣಿ ಗ್ರಾಮ ಮನಿಮಠ ದಲ್ಲಿ ಧಾರ್ಮಿಕ ಕಾರ್ಯಕ್ರಮಗಳು
ರಾಣೆಬೆನ್ನೂರು 27: ತುಂಗಭದ್ರಾ ತೀರವಾಸ ಐರಾವತ ಕ್ಷೇತ್ರ ಐರಣಿ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂ ಸಹ ಗುರುಕುಲ ಕ್ಷೇತ್ರ, ಮನೆಮಠದ ಪೀಠಾಧಿಕಾರಿಗಳಾದ ಗಜದಂಡ ಸ್ವಾಮಿ ಮತ್ತು ಪ್ರಭುಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಗುರು ಕೊಟ್ಟೂರೇಶ್ವರ ದೇವರ ಪಲ್ಲಕ್ಕಿ ಉತ್ಸವ ಶ್ರೀಮಠದಿಂದ ಸಕಲ ಬಿರುದಾವಳಿಗಳೊಂದಿಗೆ ಮತ್ತು ವಿವಿಧ ವಾದ್ಯ ಮೇಳಗಳೊಂದಿಗೆ ಗ್ರಾಮದ ಹೊರ ಭಾಗದಲ್ಲಿರುವ ಗೋಣಿ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪುರಾತನ ಕಾಲದಿಂದಲೂ ಬಂದ ಪರಂಪರೆಯಂತೆ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಅಲ್ಲಿ ಸ್ವಲ್ಪ ಕಾಲ ವಿರಮಿಸಿದ ಭಕ್ತ ಜನರು ಮಹಾಪ್ರಸಾದವನ್ನು ಸ್ವೀಕರಿಸಿದರು. ಅಖಂಡ ಶಿವ ಭಜನೆಯನ್ನು ನಡೆಸುವ ಮೂಲಕ ಭಕ್ತಿ ಪರಾಕಾಸ್ಟೇ ಮೆರೆದರು. ನಂತರ ಪುನಹ ಗ್ರಾಮಕ್ಕೆ ಆಗಮಿಸಿದ ಪಲ್ಲಕ್ಕಿ ಉತ್ಸವವು ಗ್ರಾಮದ ವೀರಭದ್ರ ದೇವಸ್ಥಾನದಲ್ಲಿ ಮಹಾ ಮಂಗಳಾರತಿ ಮಾಡಿ ಶ್ರೀ ಗುರು ಕೊಟ್ಟೂರೇಶ್ವರ ದೇವರು ಅಲ್ಲಿಯೇ ವಿರಾಜಮಾನಗೊಳಿಸಿ, ಧಾರ್ಮಿಕ ಕಾರ್ಯಕ್ರಮಗಳು ಸಾಂಗಮಂಗಳಗೊಂಡವು.