ಧಾರ್ಮಿಕ ಕಾರ್ಯಕ್ರಮಗಳಿಂದ ನಾಡಿನಲ್ಲಿ ಶಾಂತಿ, ಸೌಹಾರ್ದತೆ ಸಾಧ್ಯ: ರಂಭಾಪುರಿ ಶ್ರೀ
ಲೋಕದರ್ಶನ ವರದಿ
ಅಥಣಿ 21: ಧಾರ್ಮಿಕ ಕಾರ್ಯಕ್ರಮಗಳ ಮೂಲಕವೇ ನಾಡಿನಲ್ಲಿ ಶಾಂತಿ, ಸೌಹಾರ್ದ ಮೂಡಲು ಸಾಧ್ಯ ಎಂದು ಬಾಳೆಹೊನ್ನೊರಿನ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಮದಭಾವಿ ಗ್ರಾಮದ ಸಿದ್ಧೇಶ್ವರ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಮಾತನಾಡುತ್ತಿದ್ದರು. ಭಾರತ ಧರ್ಮ ಪ್ರಧಾನ ದೇಶವಾಗಿದೆ. ಈ ದೇಶದಲ್ಲಿ ಹತ್ತಾರು ಧರ್ಮಗಳು, ಪರಂಪರೆಗಳು ಅಸ್ತಿತ್ವದಲ್ಲಿವೆ ಎಲ್ಲ ಧರ್ಮ ಹಾಗೂ ಪರಂಪರೆಗಳ ಆಚರಣೆ ಭಿನ್ನ ಭಿನ್ನವಾಗಿದ್ದರೂ ಕೂಡ ದೇವರಲ್ಲಿ ಲೀನವಾಗುವುದೇ ಆಗಿದೆ ಎಂದರು.
ಜಾತಿಗಿಂತ ಧರ್ಮ ಶ್ರೇಷ್ಠ ಹಾಗೂ ದೊಡ್ಡದಾಗಿದೆ ಇಂತಹ ಧರ್ಮವನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ಭಕ್ತ ಸಮೂಹ ಮತ್ತು ಗುರು ಪೀಠದ ಕಾರ್ಯ ಶ್ಲಾಘನೀಯ ಎಂದರು. ಇದೇ ಗ್ರಾಮದ ಇದೇ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮಕ್ಕೆ ನಾನು 25 ವರ್ಷಗಳ ಹಿಂದೆಯೇ ಆಗಮಿಸಿದ್ದೆ ಈಗ ಮತ್ತೆ ಮೂರ್ತಿ ಪ್ರತಿಷ್ಠಾಪನೆಗೆ ಆಗಮಿಸಿರುವೆ ಇದು ನನಗೆ ಸಂತೋಷದಾಯಕ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮದಭಾವಿ ಗ್ರಾಮಸ್ಥರು ಹಾಗೂ ಸಿದ್ಧೇಶ್ವರ ದೇವಸ್ಥಾನ ಕಮೀಟಿಯಿಂದ ಶ್ರೀಗಳನ್ನು ಫಲ, ಪುಷ್ಪ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೇದ ಘೋಷ ಹೇಳಿದ ಮಲ್ಲಿಕಾರ್ಜುನ ಶಾಸ್ತ್ರಿ, ಈರಣ್ಣಾ ಶಾಸ್ತ್ರಿ, ಸಂಜಯ ಶಾಸ್ತ್ರಿ, ವಿದ್ವಾನ ಚೇತನ ಶಾಸ್ತ್ರಿ, ಕಿರಣ ಶಾಸ್ತ್ರಿ ಇವರನ್ನು ರಂಭಾಪುರಿ ಶ್ರೀಗಳು ಸತ್ಕರಿಸಿದರು. ಸಾನಿಧ್ಯ ವಹಿಸಿದ್ದ ರಂಭಾಪುರಿ ಮಠದ ಶಾಖಾ ಮಠ ಸಿಂಧನೂರಿನ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಇದಕ್ಕೂ ಮೊದಲು 25 ವರ್ಷಗಳ ನಂತರ ಮದಭಾವಿ ಗ್ರಾಮಕ್ಕೆ ಆಗಮಿಸಿದ್ದ ರಂಭಾಪುರಿ ಶ್ರೀಗಳನ್ನು ಭಕ್ತಿಯಿಂದ ಬರಮಾಡಿಕೊಂಡು ಅಲಂಕೃತ ರಥದಲ್ಲಿ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಸಿದ್ದೇಶ್ವರ ದೇವಸ್ಥಾನ ಆವರಣಕ್ಕೆ ಕರೆ ತಂದರು. ಕಾರ್ಯಕ್ರಮದಲ್ಲಿ ದೇವಸ್ಥಾನ ಕಮೀಟಿ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.