ಸಂಗೀತ ಶಿಕ್ಷಕರ ನೇಮಕಾತಿಗೆ ಒತ್ತಾಯ
ಹೂವಿನಹಡಗಲಿ 8: ಪ್ರಸಕ್ತ ಸಾಲಿನಲ್ಲಿ ಸಂಗೀತ, ಚಿತ್ರಕಲೆ, ನೃತ್ಯ, ನಾಟಕ ಮತ್ತು ದೈಹಿಕ ಶಿಕ್ಷಣ ವಿಷಯಗಳಲ್ಲಿ ಪದವಿಗಳನ್ನು ಪಡೆದವರೂ. ನಿರುದ್ಯೋಗದ ಬೇಗೆಯಲ್ಲಿ ಬೇಯುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರ ಖಾಯಂ ಹುದ್ದೆಗಳನ್ನು ಭರ್ತಿ ಮಾಡದೆ ಗುತ್ತಿಗೆ ಆಧಾರದಲ್ಲಿ ಅಥವಾ ಅತಿಥಿಗಳ ರೂಪದಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಇವರಿಗೆ ಸಿಗುವ ಸಂಬಳವೂ ಕಡಿಮೆ. ಈ ಕನಿಷ್ಠ ವೇತನದಲ್ಲಿ ಇಂದಿನ ದುಬಾರಿ ಬೆಲೆ ಏರಿಕೆಯ ಬಿಸಿಗೆ ಗೌರವಯುತ ಜೀವನ ನಡೆಸುವುದು ದುಸ್ತರವಾಗಿದೆ. ಇದರಿಂದ ಅವರು ಮಾನಸಿಕ ಜರ್ಜರಿತರಾಗುತ್ತಿದ್ದಾರೆ. ಆದ್ದರಿಂದ ಈ ಎಲ್ಲಾ ಶಿಕ್ಷಕರನ್ನು ಖಾಯಂ ಆಗಿ ನೇಮಕ ಮಾಡಿಕೊಳ್ಳಬೇಕೆಂದು ಎಐಡಿವೈಓ ಒತ್ತಾಯಿಸಿದೆ.ರಾಜ್ಯದಲ್ಲಿ ಒಟ್ಟು 5240 ಸರ್ಕಾರಿ ಪ್ರೌಢ ಶಾಲೆಗಳಿವೆ. ಅವುಗಳಲ್ಲಿ ಕೆಲಸ ಮಾಡುತ್ತಿರುವ ಈ ಎಲ್ಲಾ ಸಹಪಠ್ಯ ವಿಷಯಗಳ ಒಟ್ಟು ಬೋಧಕರ ಸಂಖ್ಯೆ 1500 ನ್ನೂ ದಾಟುವುದಿಲ್ಲ. ಅದರಲ್ಲಿ ಅನೇಕರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಇನ್ನೂ ಕೆಲವರನ್ನು ಕಡಿಮೆ ದಾಖಲಾತಿಯ ಕಾರಣಕ್ಕೆ ಬೇರೆ ಶಾಲೆಗಳಿಗೆ ವರ್ಗಾಯಿಸಲಾಗುತ್ತಿದೆ. ಪ್ರತೀ ಮಗುವಿಗೂ ಈ ವಿಷಯಗಳಲ್ಲಿ ಅರಿವು ತರಬೇತಿ ಬೇಕೆಂದ ಮೇಲೆ ಕಡಿಮೆ ದಾಖಲಾತಿಯ ಕಾರಣಕ್ಕೆ ಅಲ್ಲಿಂದ ಶಿಕ್ಷಕರನ್ನು ವರ್ಗಾಯಿಸುವ ಕ್ರಮವೇ ಆವೈಜ್ಞಾನಿಕವಾಗಿದೆ. ಇದರಿಂದಾಗಿ ರಾಜ್ಯದ ಬಹುತೇಕ ಶಾಲೆಗಳಲ್ಲಿಂದು ಈ ಸಹಪಠ್ಯ ವಿಷಯಗಳ ಬೋಧನೆಗೆ ಶಿಕ್ಷಕರೇ ಇಲ್ಲದಂತಾಗಿದೆ.
ಅಂದರೆ ಪರಿಣಿತಿ ಹೊಂದಿದ ಅಭ್ಯರ್ಥಿಗಳಿಲ್ಲವೆಂದಲ್ಲ, ಅಪಾರ ಸಂಖ್ಯೆಯ ಅಭ್ಯರ್ಥಿಗಳು ಪ್ರತಿ ವರ್ಷ ಈ ವಿಷಯಗಳಲ್ಲಿ ಪದವಿ ಗಳಿಸಿ ಉದ್ಯೋಗಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಈ ವಿಷಯಗಳಿಗೆ 2008-09ನೇ ಸಾಲಿನಲ್ಲಿ ಸುಮಾರು 600 ಶಿಕ್ಷಕರನ್ನು ನೇಮಕಾತಿ ಮಾಡಿದ್ದು ಬಿಟ್ಟರೆ ಇದೂವರೆಗೆ ಈ ಶಿಕ್ಷಕರ ನೇಮಕಾತಿಗಳೇ ಆಗಿಲ್ಲ. ವಸತಿ ಶಾಲೆಗಳಿಗೆ 2022-23ರಲ್ಲಿ ಕ್ರೈಸ್ ಅಡಿಯಲ್ಲಿ ಸುಮಾರು 1200 ಶಿಕ್ಷಕರ ನೇಮಕವಾಗಿದೆ. ಆದರೆ ಇನ್ನೂ ಬಹುತೇಕ ಶಾಲೆಗಳಿಗೆ ಈ ಶಿಕ್ಷಕರ ನೇಮಕಾತಿ ಆಗಬೇಕಿದೆ. ಮಕ್ಕಳಿಗೆ ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳು ಮಾತ್ರವಲ್ಲದೇ ಸಂಗೀತ, ಚಿತ್ರಕಲೆ, ರಂಗ ಕಲೆ ಮತ್ತು ದೈಹಿಕ ಶಿಕ್ಷಣ ಇವೇ ಮೊದಲಾದ ಲಲಿತ ಕಲೆಗಳೂ ಹಾಗೂ ಕಸರತ್ತಿನ ಕಲೆಗಳು ಅವಶ್ಯಕವಾಗಿವೆ. ಕೂಡಲೇ ಕಾಯಂ ಶಿಕ್ಷಕರ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.ಆದ್ದರಿಂದ ಈ ಅಂಶವನ್ನು ಸರ್ಕಾರ ತುಂಬಾ ಗಂಭೀರವಾಗಿ ಪರಿಗಣಿಸಬೇಕು. ಕರ್ನಾಕಟದಲ್ಲಿ ನಿರುದ್ಯೋಗದ ಬೇಗೆಯಲ್ಲಿ ಬೇಯುತ್ತಿರುವ ಸಂಗೀತ, ಚಿತ್ರಕಲೆ, ರಂಗಕಲೆಗಳಲ್ಲಿ ಮತ್ತು ದೈಹಿಕ ಶಿಕ್ಷಣ ಪದವಿ ಪಡೆದವರ ನೇಮಕಾತಿಗಾಗಿ ಕೂಡಲೇ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಎಐಡಿವೈಓ ಸಂಘಟನ ಆಗ್ರಹಿಸಿದೆ.ಬೇಡಿಕೆ. ಖಾಲಿ ಇರುವ ಸಂಗೀತ, ಚಿತ್ರಕಲೆ, ರಂಗ ಕಲಾ ಮತ್ತು ದೈಹಿಕ ಶಿಕ್ಷಕರನ್ನು ಕೂಡಲೇ ಭರ್ತಿ ಮಾಡಬೇಕು. ಅಲ್ಪಸಂಖ್ಯಾತ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಮಾತ್ರವಲ್ಲದೇ ಉಳಿದ ಎಲ್ಲಾ ಸಕಾರಿ ಶಾಲೆಗಳಿಗೆ ಖಾಯಂಆಗಿ ಈ ಎಲ್ಲ ಸಹಪಠ್ಯ ವಿಷಯಗಳಿಗೆ ಶಿಕ್ಷಕರನ್ನು ಕೂಡಲೇ ನೇಮಿಸಬೇಕು. ಕಡಿಮೆ ದಾಖಲಾತಿಯ ಕಾರಣಕ್ಕೆ ಈ ಹುದ್ದೆಗಳನ್ನು ರದ್ದುಪಡಿಸುವುದನ್ನು ನಿಲ್ಲಿಸಿ ಎಲ್ಲಾ ಪ್ರೌಢ ಶಾಲೆಗಳಿಗೂ ಈ ವಿಷಯಗಳಿಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಮನವಿಯನ್ನು ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ರವಿಯಲ್ಲಪ್ಪ, ಅಜಯ, ಮಂಜುನಾಥ, ವಿನಯ್, ಗೀತಾ, ಅನುರಾಧ, ನಾಗರತ್ನ, ಹಾಲೇಶ ನಾಯಕ ಇದ್ದರು.