ಅದ್ದೂರಿಯಾಗಿ ಜರುಗಿದ ಲಿಂಗದಹಳ್ಳಿ ಹಿರೇಮಠದ ರಥೋತ್ಸವ
ರಾಣೇಬೆನ್ನೂರು 22: ತಾಲೂಕಿನ ಸ್ಪಟಿಕಲಿಂಗ ಖ್ಯಾತಿಯ, ಲಿಂಗದಹಳ್ಳಿ ಗ್ರಾಮದ ರಂಭಾಪುರಿ ಶಾಕ ಹಿರೇಮಠದ ಪವಿತ್ರ ಕ್ಷೇತ್ರದಲ್ಲಿ ಗುರುವಾರ ಮುಂಜಾನೆ, ರೇಣುಕಾಚಾರ್ಯರ ಜಯಂತೋತ್ಸವದ ನಿಮಿತ್ತ ಆಯೋಜಿಸಿದ್ದ, ವಾರ್ಷಿಕ ಸಂಪ್ರದಾಯದ ಮಹಾರಥೋತ್ಸವ, ಹಾಗೂ ಧಾರ್ಮಿಕ ಪರಂಪರೆಯ ಗುಗ್ಗಳೋತ್ಸವವು, ಸಾವಿರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ನೆರವೇರಿಸಲಾಯಿತು. ರಥೋತ್ಸವಕ್ಕೆ ಸಾಂಪ್ರದಾಯಕ ಪೂಜೆ ಪುನಸ್ಕಾರಗಳೊಂದಿಗೆ, ಚೆನ್ನಮಲ್ಲ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳವರು, ರಥೋತ್ಸವಕ್ಕೆ ಚಾಲನೆ ನೀಡಿದರು. ರಾಣೇಬೆನ್ನೂರಿನ ವೀರಗಾಸೆಪುರವಂತಿಕೆ ಕಲಾವಿದರಾದ ಬಸವಣ್ಣೆಪ್ಪ ಸಣ್ಣ ಸಿದ್ದಪ್ಪ ಅಟವಾಳಗಿ ತಂಡದವರ ಸಮಾಳ ಮೇಳವು, ರಥೋತ್ಸವಕ್ಕೆ ವಿಶೇಷ ಮೆರಗು ನೀಡಿದ್ದವು. ರಥೋತ್ಸವ ಸಾಗಿದ ಮಾರ್ಗದುದ್ದಕ್ಕೂ ಗ್ರಾಮಾಂತರ ಪ್ರದೇಶದ ಮಹಿಳೆಯರು ಚಿತ್ತ ಚಿತ್ತಾರದ ರಂಗೋಲಿ ಬಿಡಿಸಿ, ಪುಷ್ಪಗಳನ್ನು ಅಲಂಕರಿಸಿ ತಳಿರು ತೋರಣಗಳಿಂದ ಶ್ರೀಂಗರಿಸಿದ್ದರು. ಅತ್ಯಂತ ಭಕ್ತಿ ಭಾವದಿಂದ ಸ್ವಾಗತಿಸಿ ಪೂಜೆ ಸಲ್ಲಿಸುವುದು ಸಾಮಾನ್ಯವಾಗಿತ್ತು.