ಗುಳೇದಗುಡ್ಡದಲ್ಲಿ ರಂಗದೀಪ್ತಿ ಅಭಿನಂದನಾ ಗ್ರಂಥ ಬಿಡುಗಡೆ
ಗುಳೇದಗುಡ್ಡ 11: ಕೆಲವು ವ್ಯಕ್ತಿಗಳಿಂದ ಕೆಲವು ಗ್ರಾಮಗಳು ಇತಿಹಾಸ ಪ್ರಸಿದ್ಧಿಯಾಗುತ್ತವೆ. ಹಾಗೆಯೇ ಪ್ರೇಮಾ ಗುಳೇದಗುಡ್ಡ ಅವರಿಂದ ಗುಳೇದಗುಡ್ಡದ ಹೆಸರು ಗ್ರಂಥದಲ್ಲಿ ದಾಖಲೀಕರಣವಾಗಿ ಉಳಿಯುತ್ತದೆ. ರಾಜ್ಯದಲ್ಲಿ ಕಂಪನಿ ಕಟ್ಟಿ ಅದನ್ನು ಮುನ್ನಡೆಸಿಕೊಂಡು ಬರುತ್ತಿರುವ ಇವರ ಸಾಧನೆ ಮೆಚ್ಚುವಂತಹದ್ದು ಎಂದು ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಆರ್.ಭೀಮಸೇನ್ ಹೇಳಿದರು.
ಅವರು ಶನಿವಾರ ಪಟ್ಟಣದ ಕರನಂದಿ ರಂಗಮಂದಿರದಲ್ಲಿ ಜರುಗಿದ ರಂಗನಟಿ ಪ್ರೇಮಾ ಗುಳೇದಗುಡ್ಡ ಅವರನ್ನು ಕುರಿತಾದ ರಂಗದೀಪ್ತಿ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ, ಪ್ರೇಮಾ ಗುಳೇದಗುಡ್ಡ ಅವರ ಅಭಿನಂದನಾ ಗ್ರಂಥ ಬಿಡುಗಡೆಯಾಗುತ್ತಿರುವುದು ಬಹಳ ಖುಷಿ ತಂದಿದೆ. ಅವರ ಅಭಿಮಾನಿಗಳಿಂದ ಹೊರಬರುತ್ತಿರುವ ಅಭಿನಂದನಾ ಗ್ರಂಥ ರಂಗದೀಪ್ತಿ ಸಮಕಾಲೀನ ಹಾಗೂ ಮುಂದಿನ ಪೀಳಿಗೆ ಅವರು ಸಾಧಿಸಿದ ಬದುಕನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಮುರಘಾಮಠದ ಕಾಶೀನಾಥ ಶ್ರೀಗಳು ಮಾತನಾಡಿದರು. ಅಭಿನವ ಕಾಡಸಿದ್ದೇಶ್ವರ ಶ್ರೀಗಳು ದಿವ್ಯ ಸಾನಿಧ್ಯವಹಿಸಿದ್ದರು. ಅಧ್ಯಕ್ಷತೆವಹಿಸಿ ಮಾಜಿ ಶಾಸಕ, ಗ್ರಂಥದ ಪ್ರಧಾನ ಸಂಪಾದಕ ಮಲ್ಲಿಕಾರ್ಜುನ ಬನ್ನಿ ಮಾತನಾಡಿ, ಪ್ರೇಮಾ ಗುಳೇದಗುಡ್ಡ ನಾಡಿನ ಬಹು ಅಪರೂಪದ ನಟಿ. ನಾಟಕ ಕಂಪನಿ ಕಟ್ಟಿ ಸಾಕಷ್ಟು ಏಳು ಬೀಳುಗಳನ್ನು ಕಂಡವಳು. ಅವಳ ಬದುಕಿನ ರಂಗದೀಪ್ತಿ ಸಾಕಷ್ಟು ಚನ್ನಾಗಿ ಮೂಡಿ ಬಂದಿದೆ ಎಂದರು.
ಮಾಜಿಶಾಸಕ ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ಜಿಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಹಿರಿಯ ಕವಿಯಿತ್ರಿ ಡಾ. ಸರಸ್ವತಿ ಚಿಮ್ಮಲಗಿ, ಮಾತನಾಡಿದರು. ಡಾ.ವಿಶ್ವನಾಥ ವಂಶಾಕೃತಮಠ ರಂಗದೀಪ್ತಿ ಗ್ರಂಥ ಕುರಿತು ಅವಲೋಕನ ಮಾಡಿ ಮಾತನಾಡಿದರು. ಕಲಾವಿದ ಡಾ.ಗವಿಮಠ, ಆರ್.ಡಿ.ಬಾಬು, ಪಿ.ಎನ್.ಪವಾರ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಸಿ.ಎಂ.ಜೋಶಿ, ನಾಟಕ ಅಕಾಡೆಮಿ ಸದಸ್ಯರಾದ ವಿನೋದ ಅಂಬೇಕರ, ರಾಚಪ್ಪ ಬಡಿಗೇರ, ಮಹೇಶ ಪಾಟೀಲ, ಪ್ರಕಾಶ ಮುರಗೋಡ, ಬೆಂಗಳೂರು ರಂಗ ಸಮಾಜದ ಸದಸ್ಯ ಶ್ರೀಧರ ಹೆಗಡೆ, ಸಂಗಪ್ಪ ಆಲೂರ ವೇದಿಕೆ ಮೇಲಿದ್ದರು.
ಮಾಜಿ ನಾಟಕ ಅಕಾಡೆಮಿ ಅಧ್ಯಕ್ಷ ಬಿ.ಎಲ್.ಶೇಕ್ಮಾಸ್ತರ ಆರಂಭದಲ್ಲಿ ರಂಗಗೀತೆ ಹಾಡಿದರು. ನಾಟಕ ಕಲಾವಿದೆ ಗೀತಾ ಚಿಮ್ಮಲ ಸ್ವಾಗತ ಗೀತೆ ಹಾಡಿದರು. ಗೀತಾ ಚಿಮ್ಮಲ, ಗೀತಾ ಚಿಂತಾಕಲ ಸೇರಿದಂತೆ ವಿವಿಧ ರಂಗ ಕಲಾವಿದರಿಗೆ ಸನ್ಮಾನ ಮಾಡಲಾಯಿತು. ಗ್ರಂಥದ ಸಂಪಾದಕ ಡಾ. ಪ್ರಕಾಶ ನರಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ರಂಗ ಕಲಾವಿದರ ಸಮೂಹಗಳಿಂದ ಪ್ರೇಮಾ ಗುಳೇದಗುಡ್ಡ ಅವರನ್ನು ಸನ್ಮಾನಿಸಲಾಯಿತು.