ಇಂದು ಚಳಗೇರಿ ಗ್ರಾಮದಲ್ಲಿ ಡಾ. ಮಹಾಂತೇಶ್ವರ ಸ್ವಾಮಿಗಳವರ ಶಿವಗಣರಾಧನೆ
ರಾಣೇಬೆನ್ನೂರು 24: ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ, ನಾಡಿನ ಅಸಂಖ್ಯಾತ ಭಕ್ತರ ಪಾಲಿನ ಆರಾಧ್ಯ ದೈವ, ನಡೆದಾಡುವ ದೇವರೆಂದೆ ಖ್ಯಾತಿ ಪಡೆದಿದ್ದ ಜಡೆ ಒಡೆಯ, ಗ್ರಾಮದ ಶ್ರೀ ಮಠದ ಶ್ರೀ ಗುರು ಡಾ: ಮಹಾಂತೇಶ್ವರ( ಕಟಗಿಹಳ್ಳಿಮಠ ) ಸ್ವಾಮಿಗಳವರು ಕಳೆದ ಸೆಪ್ಟೆಂಬರ್ 15. 2023ರಂದು ಶುಕ್ರವಾರ ಲಿಂಗೈಕ್ಯರಾದರು.
ಚಳಗೇರಿ ಗ್ರಾಮದ ತಂದೆ ಕೊಟ್ರಯ್ಯ ತಾಯಿ ಸಾವಮ್ಮ ಅವರ ಗರ್ಭ ಸಂಜಾತರಾದ ಲಿಂಗೈಕ್ಯ ಡಾ. ಮಹಾಂತೇಶ್ವರ ಸ್ವಾಮಿಜಿ ಅವರು 1.6.1952 ಜನ್ಮ ತಾಳಿದ್ದರು. ಜನ್ಮತಹ ಆಧ್ಯಾತ್ಮ ಮತ್ತು ಧರ್ಮ ಜ್ಞಾನ ದಿವ್ಯತ್ವದ ಕುರುಹು ತೋರಿದ್ದ ಶರಣರವರು. ಸ್ವ ಗ್ರಾಮ ಚಳಗೇರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ, ಎಂ.ಎ.ಪದವಿ ಪಡೆದು, ಅರವಿಂದ್ ಘೋಷ ಅವರ ಬಗ್ಗೆ ಸಂಶೋಧನಾ ಪ್ರಬಂಧವನ್ನು ಮಂಡಿಸಿ, ಗೌರವ ಡಾಕ್ಟರೇಟ್ ಗಳಿಸಿದ್ದರು. 72 ವರ್ಷಗಳ ಕಾಲ ತಮ್ಮ ಆಧ್ಯಾತ್ಮ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸಾರ್ಥಕ ಬದುಕು ಅನುಭವಿಸಿದ ಸ್ವಾಮೀಗಳವರು ಎಂದಿಗೂ, ಯಾರಿಂದಲೂ ಎನನ್ನು ಅಪೇಕ್ಷಿಸಿದೆ ಅವರು ತಮ್ಮ ಸ್ವಂತ ಜಮೀನಿನಲ್ಲಿ ಶ್ರೀ ಮಠವನ್ನು ಪ್ರತಿಷ್ಠಾಪಿಸಿ ಆಧ್ಯಾತ್ಮಿಕ ಬದುಕಿನೊಂದಿಗೆ ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರ ಮತ್ತು ಗ್ರಾಮೀಣ ಸಂಸ್ಕಾರ ಪರಂಪರೆಯ ಜ್ಞಾನ ಬೋಧನೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದರು.
ಯಾವುದೇ ಜಾತಿ, ಮತ, ಬೇದ, ಭಾವ ತೋರದೆ ಸರ್ವರೂಳಗೊಂದಾಗಿ, ಪರಸ್ಪರ ಪ್ರೀತಿ, ವಿಶ್ವಾಸದಲ್ಲಿ ತಮ್ಮ ಸಾರ್ಥಕ ಬದುಕನ್ನು ಸಾಧಿಸಿ, ಭಾವೈಕ್ಯತೆ ಬಿಂಬಿಸಿದ ಶರಣರು. ನಿಸ್ವಾರ್ಥ ಸೇವೆಯೇ ಸನ್ಯಾಸಿಗಳ ಮೂಲ ಮಂತ್ರ ಎನ್ನುವಂತೆ 2014ರಲ್ಲಿ ಡಾ. ಮಹಾಂತೇಶ್ವರ ಟ್ರಸ್ಟ್ ಕಮಿಟಿ ನೋಂದಾಯಿಸಿದ್ದಾರೆ. ತಮ್ಮ ಕಾಲಾನಂತರ ಶ್ರೀ ಮಠವು ಟ್ರಸ್ಟಿನ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ತಮ್ಮ ಸ್ವಯಾರ್ಜಿತ ಮತ್ತು ಪಿತ್ರಾಜಿತ ಆಸ್ತಿಗಳು ಟ್ರಸ್ಟಿಗೆ ಸೇರತಕ್ಕದ್ದು, ಎಂದು ಮೃತ್ಯು ಪತ್ರ ಸಹ ಮಾಡಿದ್ದಾರೆ. ಇರುವ ಆಸ್ತಿಗಳ ಕೃಷಿ ಉತ್ಪನ್ನದಿಂದ ಶ್ರೀ ಮಠ ಮುನ್ನೇಡೆಸಬೇಕು ಎಂದು ಭಕ್ತರಿಗೆ ಆದೇಶಿಸಿದ್ದಾರೆ. ಅಲ್ಲದೆ ತಮ್ಮ ಆಸ್ತಿ ಅಥವಾ ಶ್ರೀ ಮಠವು ಸಂಬಂಧಿಕರಿಗೆ ಸೇರದೇ ಸಾರ್ವಜನಿಕರಿಗೆ ಉಪಯೋಗವಾಗಬೇಕು ಎಂಬ ಆಶಯವನ್ನು ಹೊಂದಿದ್ದಾರೆ. ನಮ್ಮೊಂದಿಗೆ ಇಂದು ಶ್ರೀಗಳು ಭೌತಿಕವಾಗಿ ಇಲ್ಲವಾದರೂ, ಲಕ್ಷಾಂತರ ಭಕ್ತರಿಗೆ ಅವರು ಬೋಧಿಸಿದ ವೈಚಾರಿಕ ಮತ್ತು ತಾತ್ವಿಕ ಮೌಲ್ಯಗಳು ಎಂದೆಂದಿಗೂ ನಮ್ಮೊಂದಿಗೆ ಜೀವಂತವಾಗಿವೆ. ಶಿವಗಣಾರಾಧನೆ : ಸೆ. 25ರಂದು ಸೋಮವಾರ ಮುಂಜಾನೆ 10 ಗಂಟೆಗೆ ಲಿಂಗೈಕ್ಯ ಶ್ರೀ ಗುರು ಡಾ. ಮಹಾಂತೇಶ್ವರ ಶರಣರ ಶಿವಗಣಾರಾಧನೆ ಹಾಗೂ ಧರ್ಮ ಜಾಗೃತಿ ಸಮಾವೇಶವು ಚಳಗೇರಿ ಗ್ರಾಮದ ಶ್ರೀ ಮಠದ ಸಭಾಂಗಣದಲ್ಲಿ ನಡೆಯಲಿದೆ, ಸಮಾವೇಶದಲ್ಲಿ ಖಂಡೇರಾಯನಹಳ್ಳಿ ಶ್ರೀ ನಾಗರಾಜ ನಂದ ಶ್ರೀಗಳು, ಲಿಂಗದಹಳ್ಳಿ ಶ್ರೀ ವೀರಭದ್ರ ಶಿವಾಚಾರ್ಯರು ಹಾಗೂ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ಸೇರಿದಂತೆ ನಾಡಿನ ಅನೇಕ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸರ್ವ ಭಕ್ತರು ಪಾಲ್ಗೊಂಡು ದಿವ್ಯದರ್ಶನ ಸಂದೇಶವನ್ನು ಪಡೆಯಬೇಕೆಂದು ಶ್ರೀ ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಕೋರಿದ್ದಾರೆ.