“ರಮೇಶ್ ಸರ್ ನೀವು ಜೆಂಟಲ್ ಮ್ಯಾನ್” ಸುದೀಪ್ ಶ್ಲಾಘನೆ
ಬೆಂಗಳೂರು, ಸೆ 10: ನಟ, ನಿರ್ದೇಶಕ ರಮೇಶ್ ಅರವಿಂದ್ ಅವರ ಹುಟ್ಟು ಹಬ್ಬದ ಪ್ರಯುಕ್ತ ‘100’ ಚಿತ್ರತಂಡದಿಂದ ಬರ್ತಡೇ ಸ್ಪೆಷಲ್ ಹಾಡೊಂದು ಬಿಡುಗಡೆಯಾಗಿದ್ದು, ಈ ಹಾಡನ್ನು ಡಿ ಬೀಟ್ಸ್ ಚಾನೆಲ್ ಬಿಡುಗಡೆಗೊಳಿಸಿದೆ.
ಇದೇ ವೇಳೆ ನಟ ರಮೇಶ್ ಗೆ ಸ್ಯಾಂಡಲ್ ವುಡ್ ನಟ ನಟಿಯರು 56ನೇ ಜನ್ಮದಿನದ ಶುಭ ಕೋರಿದ್ದಾರೆ. ಕಿಚ್ಚ ಸುದೀಪ್, “ನೀವು ಕೇವಲ ಬಹುಮುಖ ನಟ ಮಾತ್ರವಲ್ಲ, ನೀವು ಒಬ್ಬ ಜೆಂಟಲ್ ಮ್ಯಾನ್. ಸರ್, ನಿಮ್ಮನ್ನು ತುಂಬಾ ವರ್ಷಗಳಿಂದ ತಿಳಿದಿದ್ದೇನೆ. ಇಲ್ಲಿಯವರೆಗೂ ನಾನು ಅದೇ ಅದ್ಭುತ ಮನುಷ್ಯನನ್ನು ನೋಡುತ್ತಿದ್ದೀನಿ. ನಿಮಗೆ ಆರೋಗ್ಯ, ಸಂತೋಷ ಸಿಗಲಿ. ಹುಟ್ಟುಹಬ್ಬದ ಶುಭಾಶಯಗಳು ರಮೇಶ್ ಅರವಿಂದ್ ಸರ್" ಎಂದು ಶ್ಲಾಘಿಸಿದ್ದಾರೆ.
ಸ್ಯಾಂಡಲ್ ವುಡ್ ಡಾಲಿ ಧನಂಜಯ್, ನಟ ನಿರೂಪ್ ಭಂಡಾರಿ ಕೂಡ ಹಾರೈಸಿದ್ದು, ನಿಮ್ಮ 100ನೇ ಚಿತ್ರಕ್ಕೆ ಅಭಿನಂದನೆಗಳು. ಸದಾ ಸಕಾರಾತ್ಮಕತೆಯನ್ನು ಹರಡುತ್ತಿರುವುದಕ್ಕಾಗಿ ಮತ್ತು ನಾವು ಭೇಟಿಯಾದಾಗಲೆಲ್ಲ ಪ್ರೋತ್ಸಾಹದ ಮಾತುಗಳನ್ನು ಹೇಳುತ್ತಿರುತ್ತೀರಿ ಧನ್ಯವಾದಗಳು' ಎಂದು ಹೇಳಿದ್ದಾರೆ.
ನಟ ಶ್ರೀಮುರಳಿ, 'ರಮೇಶ್ ಅರವಿಂದ್ ಸರ್, ಜನ್ಮ ದಿನದ ಶುಭಾಶಯಗಳು. ನಿಮ್ಮ ನಗು ಮುಖ ಮತ್ತು ನಗುವ ಕಣ್ಣುಗಳು ಸದಾ ಹೀಗೆ ಇರಲಿ. ಮತ್ತಷ್ಟು ಯಶಸ್ಸು, ಸಂತೋಷ ಸಿಗಲಿ' ಎಂದು ಹೇಳುತ್ತ '100' ಸಿನಿಮಾದ ಹಾಡನ್ನು ಶೇರ್ ಮಾಡಿದ್ದಾರೆ
ತೆಲುಗು ಚಿತ್ರರಂಗದ ಖ್ಯಾತ ನಟಿ ಕಾಜಲ್ ಅಗರ್ ವಾಲ್ ಸಹ ರಮೇಶ್ ಅರವಿಂದ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ರಮೇಶ್ ಸರ್' ಎಂದು ಟ್ಟೀಟ್ ಮಾಡಿದ್ದಾರೆ.
ಶುಭ ಕೋರಿದ ನಟ, ನಟಿಯರಿಗೆ ಹಾಗೂ ಅಭಿಮಾನಿಗಳಿಗೆ ನಟ ರಮೇಶ್ ಅರವಿಂದ್ ಧನ್ಯವಾದ ಸಲ್ಲಿಸಿದ್ದಾರೆ. ಥಿಯೇಟರ್ ಗಳು ತೆರೆದ ಬಳಿಕ ‘100’ ಚಿತ್ರ ತೆರೆಗೆ ಬರಲಿದೆ.