ಮನರಂಜನೆ

ರಾಗಿಣಿ, ಸಂಜನಾ ಸುಳ್ಳು ಗಾರ್ತಿಯರು: ನಟ ಆಸಿಫ್ ಇಕ್ಬಾಲ್

ರಾಗಿಣಿ, ಸಂಜನಾ ಸುಳ್ಳು ಗಾರ್ತಿಯರು: ನಟ ಆಸಿಫ್ ಇಕ್ಬಾಲ್

ಬೆಂಗಳೂರು, ಸೆಪ್ಟೆಂಬರ್.15 :ನಟಿಯರಾದ ರಾಗಿಣಿ ದ್ವಿವೇದಿ,  ಸಂಜನಾ ಗಲ್ರಾನಿ ಹೊಸಬರಲ್ಲ. ನನಗೆ ಗೊತ್ತಿರುವ ಹಾಗೆ ಇವರಿಬ್ಬರೂ ಅಪ್ಪಟ ಸುಳ್ಳುಗಾರ್ತಿಯರು ಎಂದು ಸ್ಯಾಂಡಲ್ ವುಡ್ ನಟ ಆಸಿಫ್ ಇಕ್ಬಾಲ್ ಆರೋಪಿಸಿದ್ದಾರೆ.     

ಈಗಾಗಲೇ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ  ನಟಿ ರಾಗಿಣಿ ನ್ಯಾಯಾಂಗ ಬಂಧನದಲ್ಲಿದ್ದು, ಸಂಜನಾ ಸಿಸಿಬಿ ಕಸ್ಟಡಿಯಲ್ಲಿದ್ದಾರೆ. ಸಂಜನಾರ ನಿಜವಾದ ಹೆಸರು ಅರ್ಚನಾ ಆಗಿದ್ದು, ಮೂಲತಹ ಇವರು ಸಿಂಧಿ ಸಮುದಾಯದವರು. ಚಾಮರಾಜ ಪೇಟೆ ಉಮಾ ಥೇಟರ್ ಬಳಿ ಸಣ್ಣ ಮನೆಯಲ್ಲಿ ವಾಸವಾಗಿದ್ದರು. ನಾನು ಆ ಕಾಲದಲ್ಲೇ ಅವರನ್ನು  ಭೇಟಿಯಾಗಿದ್ದೆ. ಇವರ ಮೊದಲನೇ ಚಿತ್ರ ಆಟೋಗ್ರಾಫ್ ಪ್ಲಿಸ್.‌ ಆದರೆ ಅವರು ಮೊದಲನೇ ಚಿತ್ರ ಗಂಡ ಹೆಂಡತಿ ಎಂದು ಸುಳ್ಳು ಹೇಳುತ್ತಿದ್ದಾರೆ.

ಇನ್ನು, ನಟಿ ರಾಗಿಣಿ ಅವರು ಸಹ ಇದೇ ರೀತಿ ಸುಳ್ಳು ಹೇಳುತ್ತಿದ್ದಾರೆ. ನನ್ನ ಮೊದಲನೇ ಚಿತ್ರ ವೀರ ಮದಕರಿ ಎಂದು ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಶಿವರಾಜ್ ಹೊಸಕೆರೆ ಹೆಸರಿನವರು ಒಬ್ಬ ನಿರ್ದೇಶಕರು ಇವರ ಎರಡು ಚಲನಚಿತ್ರ ನಿರ್ದೇಶಿಸಿದ್ದಾರೆ. ನಟ  ದಿಗಂತ್ ಹಾಗೂ ಬೆಳ್ಳಿ ಬೆಟ್ಟ ಸುನೀಲ್‌. ಶಂಕರಲಿಂಗ ಸುಬ್ಬನಹಳ್ಳಿ ಜೊತೆ ನಾನು ಬೆಂಗಳೂರಿನ ಇಂದ್ರಪ್ರಸ್ಥ ಹೊಟೇಲ್‌ನಲ್ಲಿ ಊಟಕ್ಕೆ ಹೋಗಿದ್ದಾಗ ರಾಗಿಣಿಗೆ ಭೇಟಿ ಆಗಿದ್ದೆ. ಆಗ ಅವರ ಬಳಿ ಏನೂ ಇರಲಿಲ್ಲ. ಈ ಇಬ್ಬರೂ ನಾಯಕಿಯರಿಗೆ  10 ರಿಂದ 20 ಲಕ್ಷ ರೂ ಅಷ್ಟೆ ಸಂಭಾವನೆ ಇತ್ತು. ಇದು ಇಡೀ ಗಾಂಧಿನಗರಕ್ಕೆ ಗೊತ್ತಿರುವ ವಿಚಾರ. ಆದರೂ ಇಷ್ಟೆಲ್ಲಾ ಕೋಟಿಗಟ್ಟಲೆ ಆಸ್ತಿ ದುಡ್ಡು ಇವರ ಬಳಿ ಬಂದಿದ್ದಾದರೂ ಎಲ್ಲಿಂದ ಎಂದು ಅವರು ಪ್ರಶ್ನಿಸಿದ್ದಾರೆ. 

ಅನೈತಿಕ ಚಟುವಟಿಕೆ ಡ್ರಗ್ ಮಾಫಿಯಾ ಅಂತ ನೀವು ಕೇಳಿದ್ದೀರಾ. ಇವರ ಹಿಂದೆ ಯಾರು ಯಾರು ಇದ್ದಾರೆ? ಎಂಬುದು ತನಿಖೆಯಿಂದ ಹೊರ ಬರಲಿದೆ. ನನಗೂ ಕನ್ನಡ ಚಿತ್ರರಂಗಕ್ಕೂ ಸುಮಾರು ವರ್ಷಗಳ ನಂಟಿದೆ. ನಾನು ಕೂಡ 5 ಚಲನಚಿತ್ರದಲ್ಲಿ ನಟಿಸಿದ್ದೇನೆ. ಪ್ರಿಯಾ ಹಾಸನ್ ಜೊತೆ ನಟಿಸಿರುವ ’ಲೇಡಿ ಟೈಗರ್’ ಇನ್ನು ಬಿಡುಗಡೆಗೊಳ್ಳಬೇಕು. ಈ ಚಿತ್ರದ ಪೊಸ್ಟ್ ಪ್ರೊಡಕ್ಷನ್ ವರ್ಕ್ ಮಾತ್ರ ಬಾಕಿ ಇದೆ. 

2021 ರಲ್ಲಿ ವಿ. ರವಿಚಂದ್ರನ್ ಅವರ ಜೊತೆ ಶಿವರಾಜ್ ಹೊಸಕೆರೆ ನಿರ್ದೇಶಿಸಲಿರುವ ಅರಸಿಬಾ ಚಿತ್ರದಲ್ಲಿ ಹಾಗೂ ನಿರ್ದೇಶಕ ಚಿತ್ರದಲ್ಲಿ  ಮುಖ್ಯಪಾತ್ರ ಮಾಡಲಿದ್ದೇನೆ. ಹಾಗಾಗಿ ನಾನು ಸ್ಯಾಂಡಲ್ ವುಡ್ ಅನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ರಾಗಿಣಿ ಮತ್ತು ಸಂಜನಾ ಇವತ್ತು ಇಷ್ಟು ದೊಡ್ಡ ಮಟ್ಟಿಗೆ ಬೆಳೆಯಲು ಇಬ್ಬರೂ ವ್ಯಕ್ತಿಗಳ ಪಾತ್ರ ಬಹಳಷ್ಟಿದೆ. ಅದು ಎಂ. ರುದ್ರೇಶ್ ಮತ್ತು ಬಿಜೆಪಿ ಮುಖಂಡ ಬಿ.ವೈ. ವಿಜಯೇಂದ್ರ ಅವರ ಪಾಲು ಸಹ ಇದೆ. 

ಎಂ.ರುದ್ರೇಶ್‌ ಇವರು ಕಂಠೀರವ ಸ್ಟುಡಿಯೋದ ಮಾಜಿ ಅಧ್ಯಕ್ಷರು. ರಾಮನಗರ ಜಿಲ್ಲೆಯ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರು ಕೂಡ ಹೌದು. ಇವರೇ ರಾಗಿಣಿ ಅವರನ್ನು ಬಿ.ವೈ. ವಿಜೇಂದ್ರಗೆ ಭೇಟಿ ಮಾಡಿಸಿದ್ದಾರೆ. ಎಂ. ರುದ್ರೇಶ್‌ ಅವರನ್ನು ವಿಚಾರಣೆಗೆ ಒಳಪಡಿಸಿದರೇ ಎಲ್ಲಾ ಸತ್ಯವೂ ಹೊರಬರಲಿದೆ ಎಂದು ಅವರು ಹೇಳಿದ್ದಾರೆ.

ಚಿತ್ರೋದ್ಯಮ ಸಾವಿರಾರು ಜನರಿಗೆ ಉದ್ಯೋಗ ನೀಡುವ ಒಂದು ದೊಡ್ಡ ಉದ್ಯಮ ಹಾಗೂ ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್, ಶಂಕರ್‌ನಾಗ, ಹಾಗೂ ಅಂಬರೀಶ್‌ರಂತಹ ಮಹಾನ್ ಕಲಾವಿದರು ಶ್ರಮಪಟ್ಟು ಬೆಳೆಸಿದ ಕನ್ನಡ ಚಿತ್ರರಂಗದ ಹೆಸರು ಹಾಳು ಮಾಡುತ್ತಿರುವ ಈ ಡ್ರಗ್ಸ್ ಮಾಫಿಯಾ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು. ನಮ್ಮ ದೇಶದ ಆಧಾರ ಸ್ತಂಭವಾದ ಯುವ ಪೀಳಿಗೆ ಡ್ರಗ್ಸ್ ಚಟಕೆ ಬಲಿಯಾಗುವುದು ತಪ್ಪಬೇಕು ಎಂದು ನಟ ಆಸಿಪ್  ಹೇಳಿದ್ದಾರೆ.

ಸುದ್ದಿ ಓದಿ