ಧಾರವಾಡ - ಹುಬ್ಬಳ್ಳಿ

ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌.ಎಸ್ ಹುಕ್ಕೇರಿಕರ ಪಾತ್ರ ಅಪಾರ : ಡಾ. ಅಜಿತ ಪ್ರಸಾದ

ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌.ಎಸ್ ಹುಕ್ಕೇರಿಕರ ಪಾತ್ರ ಅಪಾರ : ಡಾ. ಅಜಿತ ಪ್ರಸಾದ

ಸ್ವಾತಂತ್ರ್ಯೋತ್ಸವ: ಅವಿಭಜಿತ ಧಾರವಾಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಉಪನ್ಯಾಸ ಮಾಲಿಕೆ 

ಧಾರವಾಡ 07: ಧಾರವಾಡ ಕೇವಲ ವಿದ್ಯೆಗೆ ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಮಹನೀಯರು ಸೇವೆ ಸಲ್ಲಿಸಲು ಅವಕಾಶ ನೀಡಿದ ನಾಡಿದು. ವಿಶೇಷವಾಗಿ ಆರ್‌.ಎಸ್‌. ಹುಕ್ಕೇರಿಕರ ಅವರ ಸೇವೆ ಅವಿಸ್ವರಣೀಯವಾದದ್ದು ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು. 

ಅವರಿಂದು ನಗರದ ಪ್ರತಿಷ್ಠಿತ ಜೆಎಸ್‌ಎಸ್ ಆರ್‌.ಎಸ್‌.ಹುಕ್ಕೇರಿಕರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಉತ್ಸವ ಸಭಾಭವನದಲ್ಲಿ ಜರುಗಿದ ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌.ಎಸ್‌.ಹುಕ್ಕೇರಿಕರ ಅವರ ಪಾತ್ರ ಕುರಿತು ಉಪನ್ಯಾಸ ಮಾಲಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. 

ಅವರು ಹುಕ್ಕೇರಿಕರ ನಾಡುಹಿನುಡಿಗಳ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದರು. ಹಲವಾರು ಬಾರಿ ಜೈಲುವಾಸವನ್ನೂ ಅನುಭವಿಸಿದರೂ ಅವರ ಸ್ವಾತಂತ್ರ್ಯ ಹೋರಾಟದ ಕಿಚ್ಚು ಕಡಿಮೆಯಾಗಲಿಲ್ಲ. ನಾಡಿನುದ್ದಕ್ಕೂ ಸ್ವಾತಂತ್ರ್ಯ ಚಳುವಳಿಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯ ಮಾಡಿದ್ದಾರೆ. ಅವರ ಸೇವೆ ಶ್ಲಾಘನೀಯವಾದದ್ದು ಎಂದು ನುಡಿದರು. 

ಉಪನ್ಯಾಸಕರಾಗಿ ಆಗಮಿಸಿದ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಉಪನ್ಯಾಸಕ ವಿನಾಯಕ ಶೇಠ ಅವರು ಮಾತನಾಡಿ, ಆರ್‌.ಎಸ್‌.ಹುಕ್ಕೇರಿಕರ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಮುಂಬೈ ಪ್ರಾಂತ್ಯದಲ್ಲಿ ತಮ್ಮದೇ ಆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು. ಧಾರವಾಡದಿಂದ ಬಳ್ಳಾರಿಯವರೆಗೆ ಕಾಲನಡಿಗೆಯಲ್ಲಿಯೇ ಸಂಚರಿಸಿ, ಯುವ ಪೀಳಿಗೆಯನ್ನು ಒಗ್ಗೂಡಿಸುವಂತಹ ಪ್ರಯತ್ನ ಮಾಡಿದ್ದಾರೆ. ಅವರು ಶಿಕ್ಷಣ ಪ್ರೇಮಿಯೂ ಆಗಿದ್ದರು. ಅಂತಹ ಮಹಾನ ವ್ಯಕ್ತಿಗಳ ಜೀವನ ನಮಗೆ ಆದರ್ಶಪ್ರಾಯವಾದದ್ದು ಎಂದು ಹೇಳಿದರು. 

ಪ್ರಭು ಕುಂದರಗಿ ಹಾಗೂ ಕಲಾ ತಂಡದಿಂದ ದೇಶಭಕ್ತಿ ಗೀತೆಗಳನ್ನು ಹಾಡಿದರು. ವೇದಿಕೆಯ ಮೇಲೆ ಮಹಾವಿದ್ಯಾಲಯದ ಪ್ರಾಚಾರ್ಯ ಭಾರತಿ ಶಾನಭಾಗ, ಇತಿಹಾಸ ಉಪನ್ಯಾಸಕ ಸಂಘದ ಅಧ್ಯಕ್ಷ ಪ್ರಕಾಶ ಸುಣಗಾರ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಉಪನ್ಯಾಸಕಿ ಜ್ಯೋತಿ ಮಾಚಕ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಸಂಗಯ್ಯ ಶಿವಪ್ಪಯ್ಯನಮಠ ನಿರೂಪಿಸಿದರು. ಸರ್ವಮಂಗಲಾ ಕರೆಗೌಡರ ವಂದಿಸಿದರು. ಮಹಾವಿದ್ಯಾಲಯದ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ